
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,16- ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದದಲ್ಲಿ ವಿವಿಯ ಗಣಕ ವಿಜ್ಞಾನ ವಿಭಾಗ ಹಾಗೂ ವಿಶನ್ ಡಿಜಿಟಲ್ ಇಂಡಿಯಾ, ಗ್ಲೋಬಲ್ ಡಿಜಿಟಲ್ ಯುನಿವರ್ಸಿಟಿ ಹಾಗೂ ಗ್ಲೋಬಲ್ ಎಐ ಸೊಸೈಟಿ ಜಂಟಿ ಸಹಭಾಗಿತ್ವದಲ್ಲಿ ‘ಶೈಕ್ಷಣಿಕ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ; ಬಹುಶೀಸ್ತೀಯ ಶಿಕ್ಷಣ, ಸಂಶೋಧನೆ ಮತ್ತು ನಾವಿನ್ಯತೆ’ ಎಂಬ ಎರಡು ದಿನಗಳ ಅಂತರಾಷ್ಟೀಯ ವಿಚಾರ ಸಂಕಿರಣ ಆರಂಭಗೊಂಡಿದೆ.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಇಂದು ಕೃತಕಬುದ್ದಿಮತ್ತೆ ಎನ್ನುವುದು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಹರಡಿಕೊಂಡಿದೆ. ಇದನ್ನು ಸಮರ್ಪಕವಾಗಿ ಅರಿತುಕೊಂಡು ನಮ್ಮ ಅಗತ್ಯತೆಗೆ ತಕ್ಕಂತೆ ಬಳಸಿಕೊಂಡಲ್ಲಿ ಅನುಕೂಲತೆಗಳು ಹೆಚ್ಚು ಎಂದರು.
ಬಳ್ಳಾರಿಯಲ್ಲಿ ಕಳೆದ 2 ವರ್ಷ ಅವಧಿಯಲ್ಲಿ 48 ಬಾಣಂತಿಯರ ಸಾವು ಸಂಭವಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಆತಂಕ ಮೂಡಿಸಿತ್ತು. ಇದನ್ನು ತಡೆಗಟ್ಟಲು ಜಿಲ್ಲಾಡಳಿತವು ಕೃತಕ ಬುದ್ಧಿಮತ್ತೆ ಸಹಾಯದಿಂದ ಪೋಷಕಾಂಶಗಳ ಕೊರತೆಯಿಂದ ಬಳಲುವ ಗರ್ಭಿಣಿ ಸ್ತೀಯರನ್ನು ಗುರುತಿಸಿ ಅವರಿಗೆ ಪ್ರಸವದ ನಂತರ ಒದಗಬಹುದಾದ ಆಪತ್ತುಗಳನ್ನು ಎಐ ಟ್ರಾಕರ್ ಮೂಲಕ ನಿಭಾಯಿಸಿದೆವು. ಇದರಿಂದ ಈ ವರ್ಷ ಬಾಣಂತಿಯರ ಸಾವಿನ ಪ್ರಮಾಣ 4 ಕ್ಕೆ ಇಳಿದಿದೆ.ಎಐ ಯುಗದಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಕೇವಲ ತಿಳಿದುಕೊಂಡರೆ ಸಾಲದು ಅದನ್ನು ನಮ್ಮ ಸ್ವಜ್ಞಾನಕ್ಕೆ ಅನುಗುಣವಾಗಿ ಬಳಸಿಕೊಳ್ಳುವ ಚಾಕಚಕ್ಯತೆ ಹೊಂದಬೇಕು ಎಂದರು.
ವಿವಿಯ ಕುಲಪತಿ ಪ್ರೊ.ಎಂ ಮುನಿರಾಜು ಮಾತನಾಡಿ, ಎಐ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ ಮಾನವನ ಸಹಾಯವಿಲ್ಲದೆ ಅದು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳಿಗೆ ಎಐ ಜ್ಞಾನ, ಕೌಶಲ್ಯ ಅಭಿವೃದ್ಧಿ ಪಡಿಸಲು ಬರುವ ಡಿಸೆಂಬರ್ ತಿಂಗಳಲ್ಲಿ ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜನೆ ಮಾಡುತ್ತೇವೆ ಎಂದು ಹೇಳಿದರು.
ವಿಶನ್ ಡಿಜಿಟಲ್ ಇಂಡಿಯಾ ಸ್ಥಾಪಕ ಡಾ.ಹರಿ ಕೃಷ್ಣ ಮಾರನ್ ಮಾತನಾಡಿ, ಎಐ ಎಂದಿಗೂ ಸಹ ಮಾನವನ ಕೆಲಸವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ವೈದ್ಯಕೀಯ, ಶಿಕ್ಷಣ, ಪ್ರವಾಸೋದ್ಯಮ, ಉದ್ಯಮ ರಂಗಗಳಲ್ಲಿ ಎಐ ತನ್ನ ವ್ಯಾಪ್ತಿ ವಿಸ್ತರಿಸಿದೆ ಆದರೆ ಅವು ಕೇವಲ ಬಳಕೆಯ ಸಾಧನಗಳಾಗಿ ಮಾತ್ರವೇ ಸೀಮಿತವಾಗಿವೆ. ಮನುಷ್ಯನ ಬುದ್ಧಿ ಶಕ್ತಿಯ ಮುಂದೆ ಕೃತಕ ಬುದ್ಧಿಮತ್ತೆ ನಿಲ್ಲಲಾರದು ಎಂದರು.
ವಿಶನ್ ಡಿಜಿಟಲ್ ಇಂಡಿಯಾದ ಮುಖ್ಯ ಧ್ಯೇಯವೆಂದರೆ ಮಾನವನ ಜಾಣತನಕ್ಕೆ ತಂತ್ರಜ್ಞಾನದ ಬಲ ನೀಡುವುದು ಎಂದರು
ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಅಮೆರಿಕ, ಫಿನ್ಲೆಂಡ್ ದೇಶಗಳ ಎಐ ಪರಿಣಿತ ತಜ್ಞರು ತಾಂತ್ರಿಕ ಗೋಷ್ಠಿಗಳಲ್ಲಿ ತಮ್ಮ ಎಐ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ.
ವಿವಿಯ ಕುಲಸಚಿವ ಪ್ರೊ ವಿ ಲೋಕೇಶ್, ಪರೀಕ್ಷಾಂಗ ಕುಲಸಚಿವ ಪ್ರೊಎನ್ ಎಂ ಸಾಲಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ ಹನುಮೇಶ ವೈದ್ಯ ವೇದಿಕೆಯಲ್ಲಿದ್ದರು.






















