
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ 3: ಜಿಲ್ಲೆಯ ಖಾಸಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಏರುತ್ತಿರುವ ಶುಲ್ಕದ ಭಾರದಿಂದ ಪತ್ರಕರ್ತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಕಾರ್ಯನಿರತ ಪತ್ರಕರ್ತರ ಮಕ್ಕಳಿಗೆ ಶೇ. 50 ರಷ್ಟು ಶುಲ್ಕ ರಿಯಾಯಿತಿ ನೀಡುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಅವರಿಗೆ, ಜಿಪಂ ಸಿಇಓ ಮಹಮ್ಮದ್ ಹಾರೀಸ್ ಸುಮೇರ ಅವರ ಪರವಾಗಿ ಜಿಪಂ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಅವರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಅವರ ಪರವಾಗಿ ಅವರ ಮಾಧ್ಯಮ ಸಲಹೆಗಾರರಾದ ಲಕ್ಷ್ಮೀ ನಾರಾಯಾಣ ಅವರಿಗೆ
ಡಿಡಿಪಿಐ ಉಮಾದೇವಿ ಅವರ ಪರವಾಗಿ ಪ್ರಭಾರಿ ಪತ್ರಾಂಕಿತ ವ್ಯವಸ್ಥಾಪಕ ಮಹಮ್ಮಧ್ ರಫಿ ಅವರಿಗೆ, ನಿನ್ನೆ ಸಂಘದ ಜಿಲ್ಲಾ ಅಧ್ಯಕ್ಷ ಎನ್. ವೀರಭದ್ರಗೌಡ ಅವರ ನೇತೃತ್ವದಲ್ಲಿ , ಪದಾಧಿಕಾರಿಗಳು ಹಾಗು ಸದಸ್ಯರು ಸೇರಿ ಮನವಿ ಪತ್ರ ಸಲ್ಲಿಸಿದರು.
ಮನವಿಯಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಪತ್ರಕರ್ತರಿಗೆ ನಿಗಧಿತ ವೇತನ ವ್ಯವಸ್ಥೆಯಿಲ್ಲದೆ ಆರ್ಥಿಕ ಅನಿಶ್ಚಿತತೆ ಎದುರಾಗುತ್ತಿದೆ ಎಂದು ತಿಳಿಸಲಾಗಿದೆ. ಸಮಾಜದ ಹಿತಕ್ಕಾಗಿ ನಿರಂತರವಾಗಿ ದುಡಿಯುವ ಪತ್ರಕರ್ತರ ಜೀವನಮಟ್ಟ ಸುಧಾರಣೆ ಅಗತ್ಯವಾಗಿದ್ದು, ಸರ್ಕಾರದಿಂದ ಸೂಕ್ತ ಬೆಂಬಲ ದೊರಕಬೇಕು ಎಂದು ಒತ್ತಾಯಿಸಲಾಗಿದೆ.
ಇಂದಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕಗಳು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟಕರವಾಗಿದೆ. ಈ ಕಾರಣದಿಂದ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಶೇ. 50ರಷ್ಟು ಶುಲ್ಕ ರಿಯಾಯಿತಿ ನೀಡಲು ಸರ್ಕಾರದಿಂದ ಸ್ಪಷ್ಟ ಸೂಚನೆ ನೀಡಬೇಕು ಎಂದು ಸಂಘ ಮನವಿ ಮಾಡಿದೆ.
ಈ ಕ್ರಮ ಜಾರಿಯಾದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಕುಟುಂಬಗಳಿಗೆ ಶಿಕ್ಷಣದ ಆರ್ಥಿಕ ಭಾರ ಕಡಿಮೆಯಾಗುವುದಲ್ಲದೆ, ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಾಗಲಿದೆ ಎಂದು ಸಂಘ ವಿಶ್ವಾಸ ವ್ಯಕ್ತಪಡಿಸಿದೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಧ್ಯದಲ್ಲೇ ಖಾಸಗೀ ಶಾಲಾ ಕಾಲೇಜುಗಳ ಮುಖ್ಯಸ್ಥರ ಸಭೆ ಕರೆದು ಈ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆಂದು ಭರವಶೆ ನೀಡಿದರು.
ಈ ಸಂದರ್ಭದಲ್ಲಿ, ನರಸಿಂಹಮೂರ್ತಿ ಕುಲಕರ್ಣಿ, ಬಸವರಾಜ್, ಗುರುಶಾಂತಪ್ಪ, ಹರಿಶಂಕರ್, ನಾಗರಾಜ್, ವಿನಸಯಕ ಬಡಿಗೇರ ಶ್ರೀನಿವಾಸ್ ಶೆಟ್ಟಿ, ನಂದೀಶ್, ಜಂಭುನಾಥ, ವೆಂಕೋಬಿ, ತಿಮ್ಮಪ್ಪ ಚೌದರಿ, ಕೆ.ಎಂ.ಮಂಜುನಾಥ, ರೇಣುಕಾರಾಧ್ಯ, ಶಿವು, ಸಿದ್ದಪ್ಪ ಪೂಜಾರ್, ವಿರೇಶ್, ಸಿದ್ದಿಕ್, ಶಿವರಾಮ್ , ನಾಗರಾಜ ಸ್ವಾಮಿ, ಹಂದ್ಯಾಳ ಪುರುಷೋತ್ತಮ, ದಿವಾಕರ ರೆಡ್ಡಿ, ಮುರುಳಿಕಾಂತರಾವ್, ಪ್ರಭಾಕರ್, ಖಲಂದರ್, ರುದ್ರಮುನಿ ಸ್ವಾಮಿ, ಗೋವರ್ಧನ್ ರೆಡ್ಡಿ, ಪ್ರಸಾದ್, ಗುರುರಾಜ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






















