
ಸಂಜೆವಾಣಿ ನ್ಯೂಸ್
ಮೈಸೂರು:ಮೇ.07:- ಮೈಸೂರಿನ ಮಣಿಪಾಲ್ ಆಸ್ಪತ್ರೆಯು ‘ಮಣಿಪಾಲ್ ಹೆಲ್ತ್ ಸಮಿತ್’ನ ಭಾಗವಾಗಿ, ವಿಶ್ವ ಲಿವರ್ ದಿನದ ಅಂಗವಾಗಿ ನಿಮ್ಮ ವೈದ್ಯರ ಬಗ್ಗೆ ತಿಳಿಯಿರಿ' ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ವೈದ್ಯಕೀಯ ಜ್ಞಾನವನ್ನು ಜನಸಾಮಾನ್ಯರಿಗೆ ಸರಳವಾಗಿ ವಿವರಿಸುವ ಮೂಲಕ, ರೋಗಿಗಳಿಗೆ ಉಪಯುಕ್ತ ಮಾಹಿತಿ ನೀಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಸಾರ್ವಜನಿಕರು ತಜ್ಞ ವೈದ್ಯರನ್ನು ನೇರವಾಗಿ ಭೇಟಿ ಮಾಡಿ, ಯಾವುದೇ ಹಿಂಜರಿಕೆಯಿಲ್ಲದೆ ಪ್ರಶ್ನೆಗಳನ್ನು ಕೇಳಿ, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಸ್ಪಷ್ಟ ಮಾಹಿತಿಯನ್ನು ಪಡೆಯಲು ಈ ಕಾರ್ಯಕ್ರಮ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿತು. ಒಟ್ಟು 125 ಮಂದಿ ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಡಾ. ಸತೀಶ್ ರಾವ್ ಎ.ಕೆ., ಸೀನಿಯರ್ ಕನ್ಸಲ್ಟೆಂಟ್ - ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ, ಡಾ. ವಾಸುದೇವ್ ಪೈ ಹೊಸದುರ್ಗ, ಸೀನಿಯರ್ ಕನ್ಸಲ್ಟೆಂಟ್ - ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ, ಗ್ಯಾಸ್ಟ್ರೋಇಂಟೆಸ್ಟೈನಲ್ ಆಂಕೋಸರ್ಜನ್ ಮತ್ತು ಹೆಚ್.ಪಿ.ಬಿ ಸರ್ಜನ್, ಡಾ. ನಿಶ್ಚಯ್ ಆರ್. ಕನ್ಸಲ್ಟೆಂಟ್ - ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ಹಾಗೂ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. ಅವರು ಭಾಗವಹಿಸಿದ್ದರು. ಡಾ. ಸತೀಶ್ ರಾವ್ ಎ.ಕೆ. ಸೀನಿಯರ್ ಕನ್ಸಲ್ಟೆಂಟ್ - ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ, ಮಾತನಾಡಿ ``ಪದೇ ಪದೇ ಎದೆಯುರಿ, ಹೊಟ್ಟೆಯ ಹುಣ್ಣು (Uಟಛಿeಡಿs), ಕರುಳಿನ ತೊಂದರೆಗಳು (IಃS) ಮತ್ತು ಮೂಲವ್ಯಾಧಿ ಕಾಣಿಸಿಕೊಳ್ಳುತ್ತಿದ್ದರೆ, ಅವುಗಳನ್ನು ಕಡೆಗಣಿಸದೆ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಇಂತಹ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದರಿಂದ ಕ್ಯಾನ್ಸರ್‍ನಂತಹ ಗಂಭೀರ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಲಭ್ಯವಿರುವ ರೋಗ ಗುರುತಿಸುವ ವಿಧಾನಗಳನ್ನು ತಿಳಿದುಕೊಳ್ಳುವುದು ಮತ್ತು ಸಮಯಕ್ಕೆ ವೈದ್ಯರ ಸಲಹೆ ಪಡೆಯುವುದು ಉತ್ತಮ ಫಲಿತಾಂಶಕ್ಕೆ ಸಹಾಯಕ. ಜೀರ್ಣಕ್ರಿಯೆಯ ಆರೋಗ್ಯವು ಕೇವಲ ಒಂದು ದಿನದ ಆಹಾರದಿಂದ ಅಥವಾ ತಾತ್ಕಾಲಿಕ ಪರಿಹಾರದಿಂದ ಸುಧಾರಿಸುವುದಿಲ್ಲ; ನಾವು ಪ್ರತಿದಿನ ಅನುಸರಿಸುವ ಅಭ್ಯಾಸಗಳು ಇದನ್ನು ನಿರ್ಧರಿಸುತ್ತವೆ. ಸಮತೋಲಿತ ಆಹಾರ, ಸರಿಯಾದ ಸಮಯಕ್ಕೆ ಊಟ, ದೈಹಿಕ ವ್ಯಾಯಾಮ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಎಲ್ಲವೂ ಒಂದಕ್ಕೊಂದು ಸಂಬಂಧಿಸಿವೆ. ಎದೆಯುರಿ, ಹೊಟ್ಟೆ ಉಬ್ಬರ ಅಥವಾ ಮಲವಿಸರ್ಜನೆಯಲ್ಲಿ ಬದಲಾವಣೆ ಕಂಡುಬಂದಾಗ ಅದನ್ನು ಸಾಮಾನ್ಯ ಎಂದು ನಿರ್ಲಕ್ಷಿಸಬೇಡಿ. ಆರಂಭದಲ್ಲೇ ವೈದ್ಯರ ಸಲಹೆ ಪಡೆಯುವುದು ಸಣ್ಣ ಸಮಸ್ಯೆಗಳು ದೊಡ್ಡದಾಗದಂತೆ ತಡೆಯುತ್ತದೆ'' ಎಂದು ಅವರು ತಿಳಿಸಿದರು. ಡಾ. ವಾಸುದೇವ್ ಪೈ ಹೊಸದುರ್ಗ, ಸೀನಿಯರ್ ಕನ್ಸಲ್ಟೆಂಟ್ - ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ, ಗ್ಯಾಸ್ಟ್ರೋಇಂಟೆಸ್ಟೈನಲ್ ಆಂಕೋಸರ್ಜನ್ ಮತ್ತು ಹೆಚ್.ಪಿ.ಬಿ ಸರ್ಜನ್, ಯಾವ ಸಂದರ್ಭಗಳಲ್ಲಿ ವಿಳಂಬ ಮಾಡದೆ ಶಸ್ತ್ರಚಿಕಿತ್ಸಕರಿಂದ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂಬ ಬಗ್ಗೆ ಗಮನಹರಿಸಿ ಮಾತನಾಡಿ, ``ಹೊಟ್ಟೆಗೆ ಸಂಬಂಧಿಸಿದ ಅನೇಕ ಗಂಭೀರ ಕಾಯಿಲೆಗಳು ಯಾವಾಗಲೂ ದಿಢೀರನೆ ಬರುವುದಿಲ್ಲ; ಅವು ನಿಧಾನವಾಗಿ ಪ್ರಾರಂಭವಾಗುತ್ತದೆ. ಹಾಗಾಗಿ, ಸಣ್ಣ ಲಕ್ಷಣ ಕಂಡಾಗಲೇ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಮುಖ್ಯ. ಕ್ಯಾನ್ಸರ್, ಪಿತ್ತಕೋಶದ ಕಲ್ಲುಗಳು ಅಥವಾ ಕರುಳಿನ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ನೀಡಿದರೆ, ರೋಗಿಯು ಬೇಗನೆ ಮತ್ತು ಪೂರ್ಣವಾಗಿ ಗುಣವಾಗಲು ಸಾಧ್ಯ'' ಎಂಬುದನ್ನು ಅವರು ವಿವರಿಸಿದರು. ಮೈಸೂರಿನ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ.ಜೆ. ಅವರು ಮಾತನಾಡಿ, "ನೋ ಯುವರ್ ಡಾಕ್ಟರ್’ ನಂತಹ ಕಾರ್ಯಕ್ರಮಗಳ ಮೂಲಕ ಮಣಿಪಾಲ್ ಆಸ್ಪತ್ರೆಯು ಕೇವಲ ಚಿಕಿತ್ಸೆ ನೀಡುವುದಕ್ಕೆ ಸೀಮಿತವಾಗದೆ, ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ರೋಗಗಳನ್ನು ಆರಂಭದಲ್ಲೇ ತಡೆಗಟ್ಟಲು ಮತ್ತು ಜನರ ವಿಶ್ವಾಸವನ್ನು ಹೆಚ್ಚಿಸಲು ಶ್ರಮಿಸುತ್ತಿದೆ” ಎಂದು ತಿಳಿಸಿದರು.


























