
ಪುತ್ತೂರು: ರಾಜ್ಯದಲ್ಲಿ ಕಾಂಗ್ರೇಸ್ನ್ನು ಮುಸ್ಲೀಮರು ವಿರೋಧಿಸುತ್ತಿದ್ದಾರೆ. ಅದು ದಾವಣಗೆರೆ ಉಪಚುನಾವಣೆಯಲ್ಲಿ ಸ್ಪಷ್ಟಗೊಂಡಿದೆ. ಬೆಂಗಳೂರಿನಲ್ಲಿ ನಡೆದ ಮುಸ್ಲಿಂ ಪ್ರತಿಭಟನಾ ಸಮಾವೇಶದಲ್ಲಿ ಹಿಜಾಬ್ ವಿಚಾರ ಉಲ್ಲೇಖ ಮಾಡಲಾಗಿದೆ ಎಂಬ ಸಮಜಾಯಿಸುವಿಕೆಗಾಗಿ ಮುಸ್ಲಿಂ ಮತ ಬ್ಯಾಂಕ್ ಗಟ್ಟಿಗೊಳಿಸಲು ಈ ಆದೇಶದ ಮೂಲಕ ಕಾಂಗ್ರೇಸ್ ಪ್ರಯತ್ನ ಪಟ್ಟಿದೆ ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಶುಕ್ರವಾರ ಮಾದ್ಯಮದೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶಕ್ಕೆ ಪೂರಕವಾಗಿ ೨೦೨೨ರಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಸ್ತ್ರಸಂಹಿತೆ ಆದೇಶ ಮಾಡಿತ್ತು. ಪ್ರಸ್ತುತ ಈ ವಿಚಾರ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯಲ್ಲಿದೆ. ಹಾಗಾಗಿ ರಾಜ್ಯ ಸರ್ಕಾರ ಯಾವ ನೆಲೆಯಲ್ಲಿ ಈ ಆದೇಶವನ್ನು ಶಿಕ್ಷಣ ಇಲಾಖೆ ಮೂಲಕ ಕೊಟ್ಟಿದೆ ಎಂದು ಪ್ರಶ್ನಿಸಿದ ಅವರು ಇದು ಸಂವಿಧಾನ ಬಾಹಿರ ಮತ್ತು ಮುಸ್ಲಿಂ ಓಲೈಕೆ ಭಾಗವಾಗಿದೆ. ಈ ಆದೇಶವನ್ನು ಹಿಂಪಡೆಯದಿದ್ದರೆ ಈ ಬಗ್ಗೆ ನಡೆಯುವ ಎಲ್ಲಾ ಹೋರಾಟಗಳಿಗೆ ಬಿಜೆಪಿ ಸಾಥ್ ನೀಡಲಿದೆ. ಮಕ್ಕಳಲ್ಲಿ ಧರ್ಮದ ಆಧಾರದಲ್ಲಿ ಶಿಕ್ಷಣ ನೀತಿ ಅಳವಡಿಕೆ ಮಾಡಬಾರದು. ಈ ಹಿಂದೆ ಇದ್ದ ವಸ್ತ್ರಸಂಹಿತೆಯನ್ನು ಜಾರಿಗೊಳಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದ ಕಾಂಗ್ರೇಸ್ ಸರ್ಕಾರ ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ಸಂವಿಧಾನ ವಿರೋಧಿ ಹಿಜಾಬ್ ಅನುಷ್ಟಾನಕ್ಕೆ ಶಿಕ್ಷಣ ಇಲಾಖೆ ಮೂಲಕ ಆದೇಶ ಮಾಡಿರುವುದು ಅತ್ಯಂತ ಖಂಡನೀಯ ವಿಚಾರವಾಗಿದೆ ಎಂದ ಅವರು ಉಡುಪಿಯಲ್ಲಿ ಈ ಹಿಜಾಬ್ ವಿಚಾರ ೨೦೨೨ರಲ್ಲಿ ಪ್ರಾರಂಭಗೊಂಡು ಉಚ್ಛ ನ್ಯಾಯಾಲಯದ ಮೆಟ್ಟಲೇರಿತ್ತು. ನ್ಯಾಯಾಲಯದ ಆದೇಶದಂತೆ ಆಗಿನ ರಾಜ್ಯ ಸರ್ಕಾರ ಎಲ್ಲಾ ಶಾಲೆಗಳಲ್ಲಿ ವಸ್ತ್ರಸಂಹಿತೆ ಇರಬೇಕು ಎಂದು ಆದೇಶ ಮಾಡಿತ್ತು. ಶೈಕ್ಷಣಿಕ ಕೇಂದ್ರಗಳಲ್ಲಿ ಧರ್ಮಾಧಾರಿತ ವಸ್ತ್ರಸಂಹಿತೆ ಇರಬಾರದು. ಮಕ್ಕಳು ಶಾಲಾ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಲು ಅನುಕೂಲವಾಗುವಂತೆ ಯಾವುದೇ ತಾರತಮ್ಯ ಇಲ್ಲದ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿತ್ತು. ಆದರೆ ಇದೀಗ ಸಿದ್ದರಾಮಯ್ಯ ಅವರ ಸರ್ಕಾರ ಹಿಜಾಬ್ ಬಳಕೆಗೆ ಮತ್ತೆ ಅವಕಾಶ ನೀಡುವ ಆದೇಶ ಮಾಡಿರುವುದು ತಪ್ಪು ನಿರ್ಧಾರ ಎಂದು ಅವರು ಹೇಳಿದರು.
ಜನಿವಾರದ ವಿಚಾರ ಅನಗತ್ಯ
ಭಾರತೀಯ ಪಾರಂಪರಿಕತೆ ಭಾಗವಾಗಿರುವ ಜನಿವಾರದ ವಿಚಾರವನ್ನು ಅನಗತ್ಯವಾಗಿ ಈ ವಿಚಾರದಲ್ಲಿ ಎಳೆದು ತರಲಾಗಿದೆ. ನ್ಯಾಯಾಲಯಕ್ಕೆ ಹೋಗಿರುವುದು ಹಿಜಾಬ್ ವಿಚಾರ ಹೊರತು ಜನಿವಾರದ ವಿಚಾರಕ್ಕಲ್ಲ. ಕಾಂಗ್ರೆಸ್ ಸರ್ಕಾರವೇ ಜನಿವಾರವನ್ನು ತೆಗೆಸುವ ಕೆಲಸ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿತ್ತು. ಈಗ ಹಿಂದೂಗಳನ್ನು ಸಂತೃಪ್ತಿಗೊಳಿಸಲು ನಾವು ಜನಿವಾರಕ್ಕೂ ಅವಕಾಶ ಕಲ್ಪಿಸಿದ್ದೇವೆ ಎಂದು ಹಿಜಾಬ್ ಜತೆಗೆ ಜನವಾರದ ವಿಚಾರವನ್ನು ಸೇರಿಸಿದ್ದಾರೆ. ಮುಸ್ಲಿಂರ ಓಲೈಕೆ ಜತೆಗೆ ಹಿಂದೂಗಳಿಗೂ ಸಹಕಾರ ಮಾಡಿದ್ದೇವೆ ಎಂಬ ಭಾವನೆ ಮೂಡಿಸಲು ಹೊಸ ಆದೇಶ ಮಾಡಲಾಗಿದೆ ಎಂದವರು ಆರೋಪಿಸಿದರು.


























