
ಪುತ್ತೂರು; ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಉಪ್ಪಿನಂಗಡಿ ಸಮೀಪದ ಕರ್ವೇಲು ಎಂಬಲ್ಲಿ ಸರ್ವೀಸ್ ರಸ್ತೆ ಕಾಂಕ್ರೀಟಿಕರಣ ಮತ್ತು ಸಂಪರ್ಕ ರಸ್ತೆ ಸುವ್ಯವಸ್ಥೆ ಕೈಗೊಳ್ಳದಿದ್ದರೆ ಮುಂದಿನ ೧೫ ದಿನಗಳಲ್ಲಿ ಹೆದ್ದಾರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಎಚ್ಚರಿಕೆ ನೀಡಿದರು.
ಅವರು ಕರ್ವೇಲು ಎಂಬಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಇಲ್ಲಿನ ಕರ್ವೇಲು-ಶಾಂತಿನಗರ ಮತ್ತು ಪುತ್ತೂರು ನಡುವಣ ಸಂಪರ್ಕ ರಸ್ತೆಗೆ ಸಂಪರ್ಕವೇ ಇಲ್ಲದಂತೆ ಮಾಡಲಾಗಿದೆ. ಕರ್ವೇಲು ಭಾಗದಲ್ಲಿ ಸರ್ವೀಸ್ ರಸ್ತೆ ಅವ್ಯವಸ್ಥೆಯ ಸ್ಥಿತಿಯಲ್ಲಿದೆ. ಇದನ್ನು ತಕ್ಷಣ ಸರಿಪಡಿಸಬೇಕು. ಈ ನಿಟ್ಟಿನಲ್ಲಿ ಗುತ್ತಿಗೆದಾರರು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ರಸ್ತೆಯ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಈ ಭಾಗದ ಹಲವು ಮಂದಿಗೆ ಅನ್ಯಾಯವಾಗಿದೆ. ಚರಂಡಿ ನಿರ್ಮಿಸದ ಪರಿಣಾಮವಾಗಿ ಹಲವರ ತೋಟಗಳಿಗೆ ಮಳೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಹಿಂದೆ ಎಲ್ಎನ್ಟಿ ಕಂಪೆನಿಯು ಕಾಮಗಾರಿ ವಹಿಸಿಕೊಂಡಾಗ ಇಲ್ಲಿ ಮೇಲ್ಸೇತುವೆ ಮಾಡುತ್ತೇವೆ ಎಂದಿದ್ದರು. ಅದಕ್ಕೆ ಪೂರಕ ಕಾಮಗಾರಿಯೂ ನಡೆದಿತ್ತು. ಆದರೆ ಆ ಬಳಿಕ ಗುತ್ತಿಗೆ ವಹಿಸಿಕೊಂಡ ಕೆಎನ್ಆರ್ ಕಂಪೆನಿಯು ಈ ಯೋಜನೆಯನ್ನು ಬದಲಾಯಿಸಿದೆ. ಕಳೆದ ೫೦ ವರ್ಷಗಳಿಂದ ಊರ್ಜಿತದಲ್ಲಿದ್ದ ಕರ್ವೇಲು -ಶಾಂತಿನಗರ ಸಂಪರ್ಕ ರಸ್ತೆಯನ್ನು ಕಚ್ಚಾ ರಸ್ತೆ ಎಂದು ಉಲ್ಲೇಖಿಸಿರುವ ಕಾರಣ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಈ ರಸ್ತೆಯಿಂದ ಕೇಂದ್ರ ಸ್ಥಾನವಾಗಿರುವ ಪುತ್ತೂರಿಗೆ ಸಂಚರಿಸಲು ಕೇವಲ ೧೦ ಕಿ. ಮೀ ಮಾತ್ರವಿದ್ದು, ಇದೀಗ ಸುಮಾರು ೧೬ ಕೀ. ಮೀ ಸುತ್ತು ಬಳಸಿ ಉಪ್ಪಿನಂಗಡಿಗೆ ತೆರಳಿ ಸಾಗಬೇಕಾಗಿದೆ. ಅನಾರೋಗ್ಯ ಪೀಡಿತರನ್ನು ಇನ್ನಿತರ ಸಮಸ್ಯೆಗಳಿಗೆ ಪುತ್ತೂರಿಗೆ ತೆರಳಲು ಇದರಿಂದಾಗಿ ತೊಂದರೆಯಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಂಪೆನಿಯ ಅಧೀನದಲ್ಲಿದ್ದಾರೆ ಎಂದು ಆರೋಪಿಸಿದರು.
ಹೆದ್ದಾರಿ ಇಂಜಿನಿಯರ್ ಮತ್ತು ಕೆಎನ್ಆರ್ ಸಂಸ್ಥೆಯವರು ಕರ್ವೇಲು ಶಾಂತಿನಗರ ರಸ್ತೆಯನ್ನು ನೀರಿನ ಹರಿವಿಗೆ ಚರಂಡಿ ಇಲ್ಲದ ಕಾರ್ಟ್ (ಮಣ್ಣಿನ) ರಸ್ತೆ ಎಂದು ಅಸಮರ್ಪಕ ಉತ್ತರ ನೀಡಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಸರ್ವೀಸ್ ರಸ್ತೆಗಳ ಕಾಮಗಾರಿಯನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೈಬಿಡುವ ಚಿಂತನೆ ನಡೆಸಿದಾಗ ಸಾರ್ವಜನಿಕರು ಕಾಮಗಾರಿಗೆ ತಡೆ ಒಡ್ಡಿದ್ದರು. ಆ ಸಂದರ್ಭ ಸ್ಥಳಕ್ಕೆ ಬಂದ ಉಪ್ಪಿನಂಗಡಿ ಠಾಣಾ ವೃತ್ತ ನಿರೀಕ್ಷಕರು ಸರ್ವೀಸ್ ರಸ್ತೆಗಳ ಕಾಮಗಾರಿಯನ್ನು ಏಕಕಾಲದಲ್ಲಿ ಮುಂದುವರಿಸುವಂತೆ ಸೂಚನೆ ನೀಡಿದ್ದರು. ಆದರೆ ಯಾವ ಕೆಲಸವನ್ನೂ ಗುತ್ತಿಗೆದಾರರು ಮಾಡಿಲ್ಲ ಎಂದು ಅವರು ಆರೋಪಿಸಿದರು.
ಹೆದ್ದಾರಿ ಕಾಮಗಾರಿಯ ಅವೈಜ್ಞಾನಿಕತೆಯಿಂದ ಎರಡೂ ಬದಿಗಳ ರೈತರ ಕೃಷಿಗೆ ಹಾನಿಯಾಗಿದೆ. ಕೃಷಿಭೂಮಿಗೆ ನೀರು ಮತ್ತು ಮಣ್ಣು ನುಗ್ಗಿದ ಪರಿಣಾಮ ಅಡಿಕೆ ತೋಟಗಳು ಹಾಗೂ ಭತ್ತದ ಗದ್ದೆಗಳ ಕೃಷಿಗೆ ಹಾನಿಯಾಗಿದೆ. ಅದಕ್ಕೂ ಯಾವುದೇ ಪರಿಹಾರ ನೀಡಲಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಯಾವ ಪ್ರಯೋಜನವೂ ದೊರೆತಿಲ್ಲ. ಸಂಸದ ಬ್ರಿಜೇಶ್ ಚೌಟ ಅವರು ನನ್ನ ಕಾಲದಲ್ಲಿ ನಡೆದ ಕಾಮಗಾರಿಯಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಜಿಲ್ಲಾಧಿಕಾರಿಗೆ ಕನಿಷ್ಟ ೧೦ ಸಲ ಮನವಿ ಮಾಡಲಾಗಿದೆ. ಆದರೆ ಅವರಿಗೆ ವಿಚಾರವೇ ಅರ್ಥವಾಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಹೆದ್ದಾರಿಯ ಎರಡೂ ಬದಿಗಳ ಒಂದೂವರೆ ಕಿಮೀ ವ್ಯಾಪ್ತಿಯಲ್ಲಿ ಮೂರು ದೇವಳಗಳು, ದೈವಸ್ಥಾನಗಳು, ೨ ಮಸೀದಿಗಳು, ಮದ್ರಸಗಳು, ೩ ಅಂಗನವಾಡಿಗಳು, ೨ ಪ್ರೌಢಶಾಲೆ, ಭಜನಾಮಂದಿರಗಳು ಇವೆ. ಈ ಜನರಿಗೆ ಪುತ್ತೂರಿಗೆ ತಕ್ಷಣದ ಸಂಪರ್ಕ ಪಡೆಯಲು ಕರ್ವೇಲು ಶಾಂತಿನಗರ ರಸ್ತೆ ಅತೀ ಅವಶ್ಯಕವಾಗಿದೆ. ಸವೀಸ್ ರಸ್ತೆಗೆ ಇಲ್ಲಿನ ಮನೆಯೊಂದು ತಡೆಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಸ್ಥಳೀಯರಾದ ಹರ್ಷಕುಮಾರ್ ಹೆಗ್ಡೆ, ವೇಣುಗೋಪಾಲ ನೋಂಡ, ಅಬ್ದುಲ್ ಹಕೀಂ, ರೈತಸಂಘ ಹಸಿರುಸೇನೆಯ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ ಪರಣೆ, ವಿನೋದ್ ಶೆಟ್ಟಿ, ಶ್ರೀಧರ್ ರೈ ಮೇರ್ಲ, ಅಬ್ದುಲ್ ರಝಾಕ್ ಸವಣೂರು, ಪ್ರಕಾಶ್ ನಾಯಕ್, ಧರ್ಣಪ್ಪ ನಾಯ್ಕ್, ಅಬ್ದುಲ್ ರಝಾಕ್ ಕರ್ವೇಲು ಮತ್ತಿತರರು ಉಪಸ್ಥಿತರಿದ್ದರು.

























