Home ಸಿನೆಮಾ ಯುಗಾದಿ ಸಂಭ್ರಮಕ್ಕೆ ‘ಲವ್ ಮಾಕ್ಟೇಲ್–3’

ಯುಗಾದಿ ಸಂಭ್ರಮಕ್ಕೆ ‘ಲವ್ ಮಾಕ್ಟೇಲ್–3’

ಮಾರ್ಚ್ 19ರಂದು ತೆರೆಗೆ

ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಸರಿದ ಬೆನ್ನಲ್ಲೇ, ಆ ಖಾಲಿ ಮುಹೂರ್ತವನ್ನು ಸದುಪಯೋಗಪಡಿಸಿಕೊಳ್ಳಲು ಲವ್ ಮಾಕ್ಟೇಲ್ 3 ಚಿತ್ರತಂಡ ತೀರ್ಮಾನಿಸಿದೆ. ಯುಗಾದಿ ಹಬ್ಬದ ರಜೆ ಹಾಗೂ ಅದರ ನಂತರದ ವಾರಾಂತ್ಯದಲ್ಲಿ ಮಾರ್ಚ್ 19ರಂದು ಚಿತ್ರವನ್ನು ಬಿಡುಗಡೆಗೊಳಿಸುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

ಮೂಲತಃ ಏಪ್ರಿಲ್ 10ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಬದಲಾದ ಪರಿಸ್ಥಿತಿಯಲ್ಲಿ ಯುಗಾದಿಯಂದೇ ಪ್ರೇಕ್ಷಕರ ಮುಂದೆ ಬರಲಿದೆ. ಹಬ್ಬದ ಸಂಭ್ರಮ, ರಂಜಾನ್‌ ರಜೆಗಳ ಸಾಲು—ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ಆಗಮಿಸುವ ಕಾಲಘಟ್ಟವಿದು. ಈ ಹಿನ್ನೆಲೆಯಲ್ಲಿ ಮಾರ್ಚ್ 19 ಚಿತ್ರತಂಡಕ್ಕೆ ಅತ್ಯಂತ ಅನುಕೂಲಕರ ದಿನವೆನ್ನಬಹುದು.

ಚಿತ್ರವನ್ನು ನಿರ್ದೇಶಿಸಿ, ನಾಯಕನಾಗಿಯೂ ಅಭಿನಯಿಸಿರುವುದು ಡಾರ್ಲಿಂಗ್ ಕೃಷ್ಣ. ವಿತರಣೆ ಹೊಣೆ ಹೊತ್ತಿರುವುದು ಕೆವಿಎನ್ ಪ್ರೊಡಕ್ಷನ್ಸ್. ಕ್ರಿಸ್‌ಮಿ ಬ್ಯಾನರ್ ಅಡಿಯಲ್ಲಿ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಾಣ ಮಾಡಿದ್ದಾರೆ.

ಈ ಭಾಗದಲ್ಲಿ ಕೃಷ್ಣ–ಮಿಲನಾ ಜೋಡಿ ಮತ್ತೆ ಒಂದಾಗಿ ಕಾಣಿಸಿಕೊಂಡಿದ್ದು, ಅವರ ಜೊತೆಗೆ ಸಂವೃತಾ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ಅಭಿನಯಿಸಿದ್ದಾರೆ.

‘ಲವ್ ಮಾಕ್ಟೇಲ್’ ಸರಣಿಯ ಮೊದಲ ಎರಡು ಭಾಗಗಳು ಯುವಜನರ ಮನಗೆದ್ದಿದ್ದವು. ಮೂರನೇ ಭಾಗವೂ ಅದೇ ಭಾವನಾತ್ಮಕ ಹಾದಿಯಲ್ಲಿ ಸಾಗಲಿದೆಯೇ ಅಥವಾ ಹೊಸ ತಿರುವುಗಳನ್ನು ನೀಡಲಿದೆಯೇ ಎಂಬ ಕುತೂಹಲ ಮೂಡಿದೆ. ಯುಗಾದಿ ಹಬ್ಬದ ಸಂಭ್ರಮಕ್ಕೆ ಸಿಹಿ ಸೇರ್ಪಡೆಯಾಗಿ ‘ಲವ್ ಮಾಕ್ಟೇಲ್–3’ ತೆರೆಗೆ ಬರಲಿದ್ದು, ಚಿತ್ರರಂಗದ ಗಮನವನ್ನು ತನ್ನತ್ತ ಸೆಳೆಯುತ್ತಿದೆ.