Home ಜಿಲ್ಲೆ ಮೈಸೂರು ಮೈಸೂರು ಕರಗಕ್ಕೆ ಚಾಲನೆ

ಮೈಸೂರು ಕರಗಕ್ಕೆ ಚಾಲನೆ

ಸಂಜೆವಾಣಿ ನ್ಯೂಸ್
ಮೈಸೂರು: ಏ.22:-
ನಗರದ ಇಟ್ಟಿಗೆಗೂಡಿನಲ್ಲಿ ನಡೆಯುವ ಪ್ರಸಿದ್ಧ ಮೈಸೂರು ಕರಗ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಮಂಗಳವಾರ ಚಾಮುಂಡಿಬೆಟ್ಟದ ತಪ್ಪಿಲಿನಿಂದ ಚಾಮುಂಡಿಶ್ವರಿ ಹಸಿಕರಗ ಹಾಗೂ ಕೋಟೆ ಮಾರಮ್ಮ ದೇವಾಲಯದಿಂದ ಮಾರಿಯಮ್ಮನವರ ಹಸಿ ಕರಗವನ್ನು ಶ್ರದ್ಧಾಭಕ್ತಿಯಿಂದ ಮೆರವಣಿಗೆ ಮೂಲಕ ಇಟ್ಟಿಗೆಗೂಡಿನಲ್ಲಿರುವ ಕರಗ ದೇವಾಲಯಕ್ಕೆ ತರಲಾಯಿತು.
102ನೇ ಮೈಸೂರು ಕರಗ ಮಹೋತ್ಸವ ಇಂದಿನಿಂದ ಆರಂಭವಾಗಿದ್ದು, ಏ.25ರಂದು ರಾತ್ರಿ 8 ಗಂಟೆಗೆ ಕರಗ ಮಹೋತ್ಸವ ಮೆರವಣಿಗೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹಸಿ ಕರಗವನ್ನು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಕರಗ ದೇವಾಲಯಕ್ಕೆ ತಂದು ಇಡಲಾಯಿತು.


ಹಸಿ ಕರಗ: ಕರಗ ಮಹೋತ್ಸವ ಅಂಗವಾಗಿ ಮಂಗಳವಾರ ಬೆಳಗ್ಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮೆಟ್ಟಿಲು ಬಳಿಯಿರುವ ಮಂಟಪದಿಂದ ಚಾಮುಂಡೇಶ್ವರಿ ಹಸಿ ಕರಗವನ್ನು ಮಂಗಳವಾದ್ಯ, ಚಂಡೆ ಮದ್ದಳೆ, ಛತ್ರಿ, ಚಾಮರದೊಂದಿಗೆ ಮೆರವಣಿಗೆಯಲ್ಲಿ ಇಟ್ಟಿಗೆಗೂಡಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವಾಲಯಕ್ಕೆ ತರಲಾಯಿತು.


ಮಧ್ಯಾಹ್ನ ಅರಮನೆ ಕೋಟೆ ಮಾರಮ್ಮ ದೇವಾಲಯದಿಂದ ಮಾರಿಯಮ್ಮ ಹಸಿ ಕರಗವನ್ನು ಇಟ್ಟಿಗೆಗೂಡಿಗೆ ಮೆರವಣಿಗೆಯಲ್ಲಿ ತಂದು ದೇವಾಲಯದಲ್ಲಿಡಲಾಯಿತು.
ಹಸಿ ಕರಗವನ್ನು ಇಟ್ಟಿಗೆಗೂಡಿಗೆ ಮೆರವಣಿಗೆಯಲ್ಲಿ ತರುತ್ತಿದ್ದಂತೆ ಮಡಿವಾಳ ಸಮುದಾಯದವರು ಕರಗಕ್ಕೆ ಮಡಿ ಹಾಸಿ ಬರಮಾಡಿಕೊಂಡರು. ದಾರಿಯುದ್ದಕ್ಕೂ ಮಡಿ ಹಾಸಿ ಕರಗವನ್ನು ಕರೆತಂದರು. ಬಳಿಕ ಸಂಪ್ರದಾಯದಂತೆ ಹಸಿ ಕರಗಕ್ಕೆ ಮಡಿವಾಳ ಸಮುದಾಯದ ಮನೆಯಲ್ಲಿ ಮೊದಲ ಪೂಜೆ ಸಲ್ಲಿಸಲಾಯಿತು. ನಂತರ ಮತ್ತೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.
ಶಕ್ತಿದೇವತೆ ಹಾಲಭಿಷೇಕ: ಕರಗ ಮಹೋತ್ಸವ ಅಂಗವಾಗಿ ಮಂಗಳವಾರ ಬೆಳಗ್ಗಿನಿಂದಲೇ ಇಟ್ಟಿಗೆಗೂಡಿನಲ್ಲಿರುವ ರೇಣುಕಾಂಭ ದೇವಾಲಯದ ಪಕ್ಕವಿರುವ ಶಕ್ತಿದೇವತೆ ಮಾರಿಯಮ್ಮ ದೇವಾಲಯದಲ್ಲಿರುವ ದೇವಿಯ ಮೂರ್ತಿಗೆ ಇಟ್ಟಿಗೆಗೂಡಿನ ನಿವಾಸಿಗಳು ಹಾಲಿನ ಅಭಿಷೇಕ ಮಾಡಿದರು. ಕರಗ ಮಹೋತ್ಸವದ ಮೊದಲ ದಿನ ಸ್ಥಳೀಯರು ಮಾರಿಯಮ್ಮ ದೇವಾಲಯಕ್ಕೆ ಬಂದು ತಾವೇ ಹಾಲಭಿಷೇಕ ಮಾಡುವ ಪದ್ದತಿಯಿದ್ದು, ಇಂದು ನೂರಾರು ಮಂದಿ ಹಾಲಭಿಷೇಕ ಮಾಡಿ ಕರಗ ಮಹೋತ್ಸವ ಶ್ರದ್ದಾ ಭಕ್ತಿಯ ವಾತಾವರಣದಲ್ಲಿ ಮಿಂದೆದ್ದರು.


ಮೈಸೂರು ಕರಗ ಮಹೋತ್ಸವಕ್ಕೆ ಇಟ್ಟಿಗೂಡು ಬಡಾವಣೆ ಸಜ್ಜಾಗಿದ್ದು, ಎಲ್ಲೆಡೆ ದೀಪಾಲಂಕಾರ ಮಾಡಲಾಗಿದೆ. ಕರಗ ದೇವಾಲಯ(ರೇಣುಕಾಂಭ ದೇವಾಲಯ) ಸೇರಿದಂತೆ ಸುತ್ತಮುತ್ತಲಿನ ದೇವಾಲಯಗಳಿಗೂ ದೀಪಾಲಂಕಾರ, ಹೂವಿನ ಅಲಂಕಾರ ಮಾಡಲಾಗಿದ್ದು, ದೇವಾಲಯದ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ಬಡಾವಣೆ ಸಂಪರ್ಕ ಕಲ್ಪಿಸುವ ದೇವಾಲಯದ ರಸ್ತೆಯಲ್ಲಿ 102ನೇ ವರ್ಷದ ಮೈಸೂರು ಕರಗ ಮಹೋತ್ಸವಕ್ಕೆ ಸ್ವಾಗತ ಎಂಬ ಸ್ವಾಗತ ಕಮಾನು ಅಳವಡಿಸಲಾಗಿದ್ದು, ದಾರಿಯುದ್ದಕ್ಕೂ ವಿದ್ಯುತ್ ದೀಪದಿಂದ ವಿವಿಧ ಆಕೃತಿ ನಿರ್ಮಿಸಿ ಇಡಲಾಗಿದೆ.


ಹಬ್ಬದ ವಾತಾವರಣ: ಕರಗ ಮಹೋತ್ಸವದ ಅಂಗವಾಗಿ ಇಟ್ಟಿಗೆಗೂಡಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಂದು ಮನೆಯಲ್ಲೂ ಕರಗ ಮಹೋತ್ಸವವನ್ನು ದೊಡ್ಡ ಹಬ್ಬದಂತೆ ಆಚರಿಸುತ್ತಿದ್ದು, ವಿವಿಧೆಡೆಯಿಂದ ಸಂಬಂಧಿಕರನ್ನು ಆಹ್ವಾನಿಸಿದ್ದಾರೆ.