ಮಾರ್ಟಳ್ಳಿ ಕ್ರೈಸ್ತರಿಂದ ಸಮಾಧಿ ಹಬ್ಬ ಆಚರಣೆ

ಸಂಜೆವಾಣಿ ವಾರ್ತೆ
ಹನೂರು ನ 3 :-
ತಾಲೂಕಿನ ಮಾರ್ಟಳ್ಳಿ ಗ್ರಾಮದ ಸ್ಮಶಾನದಲ್ಲಿ ಭಾನುವಾರ ಕ್ರೈಸ್ತರು ತಮ್ಮ ಪೂರ್ವಿಕರ ಸಮಾಧಿಗಳಿಗೆ ಪ್ರಾರ್ಥನೆ ನೆರವೇರಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಸಮಾಧಿ ಹಬ್ಬ ಆಚರಿಸಿದರು.


ಮಾರ್ಟಳ್ಳಿ ಗ್ರಾಮದ ಕ್ರೈಸ್ತ ಧರ್ಮದ ಆಚರಣೆಯಂತೆ ಪ್ರತಿ ವರ್ಷ ನ.2 ರಂದು ಪೂರ್ವಿಕರ ಸಮಾಧಿಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಅದರಂತೆಯೇ ಸಮಾಧಿಗಳಿಗೆ ಬಣ್ಣ ಸುಣ್ಣ ಬಳಿದು ಸಿದ್ಧತೆ ಮಾಡಿಕೊಳ್ಳಲಾಗಿತ್ತು.


ಭಾನುವಾರ ಸಂಜೆ ಸಮಾಧಿಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಧರ್ಮಕೇಂದ್ರದ ಗುರುಗಳಾದ ಫಾದರ್ ಡಾ.ಎಂ. ವಿನ್ಸೆಂಟ್ ದಿವ್ಯ ಬಲಿಪೂಜೆ ನೆರವೇರಿಸಿದರು
ಈ ಸಮಯದಲ್ಲಿ ಫಾ.ಸಂತಿಯಾಗು, ಫಾ. ಪ್ರಕಾಶ್ ಫಾ.ಪಾಕಿಯರಾಜ್ , ಫಾ.ಸಗಾಯ್ ಹಾಗೂ ಇತರ ಗುರುಗಳ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ಪೂಜೆ ಸಲ್ಲಿಸಿದ್ದು ಗಮನ ಸೆಳೆಯಿತು.
ಪೂರ್ವಿಕರ ಕುಟುಂಬಸ್ಥರು ಸಮಾಧಿಯ ಮೇಲೆ ಮೇಣದ ಬತ್ತಿಯನ್ನು ಹಚ್ಚಿಡುವ ಮೂಲಕ ಪ್ರಾರ್ಥನೆ ಸಮರ್ಪಿಸಿದರು. ದಿವ್ಯ ಬಲಿ ಪೂಜೆಯಲ್ಲಿ ಲ್ಯಾಟಿನ್ ಹಾಡುಗಳು ಹಾಡಿ ಎಲ್ಲರ ಗಮನವನ್ನು ಸೆಳೆದರು.ಈ ಮೂಲಕ ಸಮಾಧಿ ಹಬ್ಬವನ್ನು ಆಚರಿಸಲಾಯಿತು.