ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.29: ಮಾಜಿ ಸ್ಪೀಕರ್ ದಿವಂಗತ ಕೆ.ಆರ್.ಪೇಟೆ ಕೃಷ್ಣ ಅವರ 85 ನೇ ಹುಟ್ಟುಹಬ್ಬದ ಅಂಗವಾಗಿ ಕೃಷ್ಣ ಪ್ರತಿಷ್ಠಾನದ ವತಿಯಿಂದ ಜುಲೈ 01 ರ ಮಂಗಳವಾರ ಪಟ್ಟಣದ ಹೋಟೆಲ್ ರಾಮದಾಸ್‍ಗೆ ಸೇರಿದ ಸುಲೋಚನಮ್ಮ ಸಭಾಂಗಣದಲ್ಲಿ ಸಾಧಕರಿಗೆ ಪುರಸ್ಕಾರ ಮತ್ತು ವಿದ್ಯರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಹಳ್ಳಿ ಜವರಾಯಿಗೌಡ ತಿಳಿಸಿದ್ದಾರೆ.
ಪಟ್ಟಣದ ಬಿಜಿಎಸ್ ಕಟ್ಟಡದಲ್ಲಿರುವ ಕೃಷ್ಣ ಪ್ರತಿಷ್ಟಾನದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮಂಡ್ಯದ ಗಾಂಧಿ ಎಂದೇ ಹೆಸರಾಗಿದ್ದ ಮಾಜಿ ಸ್ಪೀಕರ್ ಕೃಷ್ಣ ಸಜ್ಜನ ರಾಜಕಾರಣದ ಪ್ರತಿರೂಪ. ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ, ರಾಜ್ಯ ಸರ್ಕಾರದಲ್ಲಿ ಸಚಿವರಾಗಿ, ರಾಜ್ಯ ವಿಧಾನ ಸಭೆಯ ಸ್ಪೀಕರ್ ಆಗಿ ಸಂಸದರಾಗಿ ಅಧಿಕಾರದ ಉತ್ತುಂಗದಲ್ಲಿದ್ದಾಗಲೂ ಕೃಷ್ಣ ಸರಳತೆಯ ಪ್ರತಿರೂಪವಾಗಿದ್ದರು. ಪ್ರಾಮಾಣಿಕ ರಾಜಕಾರಣಿಯಾಗಿದ್ದ ಕೃಷ್ಣ ಅವರು ಮುಂದಿನ ಪೀಳಿಗೆಗೆ ಆದರ್ಶವಾಗಿ ನಿಂತಿದ್ದಾರೆ. ಕೃಷ್ಣ ಅವರ ಹೆಸರನ್ನು ಮುಂದಿನ ಪೀಳಿಗೆಗೆ ಜೀವಂತವಾಗಿಡುವ ಕೆಲಸವನ್ನು ಕೃಷ್ಣ ಪ್ರತಿಷ್ಠಾನ ಮಾಡುತ್ತಿದೆ. ಇದರ ಅಂಗವಾಗಿ ಜುಲೈ 01 ರಂದು ಬೆಳಿಗ್ಗೆ 10.30 ಕ್ಕೆ ಪಟ್ಟಣದ ಹೋಟೆಲ್ ರಾಮದಾಸ್ ಸುಲೋಚನಮ್ಮ ಸಭಾಂಗಣದಲ್ಲಿ ಸಾಧಕರಿಗೆ ಪುರಸ್ಕಾರ ಮತ್ತು ವಿದ್ಯರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಲ್ಬುರ್ಗಿ ಜಿಲ್ಲೆಯ ಅಳಂದ ಕ್ಷೇತ್ರದ ಶಾಸಕ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಾಧಕರಿಗೆ ಕೃಷ್ಣ ಪುರಸ್ಕಾರ ನೀಡಲಿದ್ದಾರೆ. ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ಪುರಸಭೆಯ ಅಧ್ಯಕ್ಷೆ ಪಂಕಜ ಪ್ರಕಾಶ್, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಜಿ ಸ್ಪೀಕರ್ ಕೃಷ್ಣ ಅಭಿಮಾನಿಗಳು ಮತ್ತು ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿವಂಗತ ಕೃಷ್ಣ ಅವರ ನೆನಪನ್ನು ಚಿರಸ್ಥಾಯಿಗೊಳಿಸುವಂತೆ ಕೃಷ್ಣ ಪ್ರತಿಷ್ಟಾನದ ಅಧ್ಯಕ್ಷ ಜವರಾಯಿಗೌಡ ಮನವಿ ಮಾಡಿದರು.
ಕೃಷ್ಣ ಪ್ರತಿಷ್ಠಾನದ ಕಾರ್ಯದರ್ಶಿ ಉಪನ್ಯಾಸಕ ಕತ್ತರಘಟ್ಟ ವಾಸು, ಸದಸ್ಯರಾದ ಮಾಕವಳ್ಳಿ ವಸಂತಕುಮಾರ್, ಐಚನಹಳ್ಳಿ ಶಿವಣ್ಣ, ಆರ್.ಎಸ್.ಶಿವರಾಮೇಗೌಡ ಸುದ್ದಿಗೋಷ್ಠಿಯಲ್ಲಿದ್ದು ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿದರು.