ದೀಕ್ಷೆ ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು: ಕಾಶಿ ಜಗದ್ಗುರು

ಕಲಬುರಗಿ:ಜು.೨: ದೀಕ್ಷೆಯು ಪ್ರತಿಯೋಬ್ಬ ಮನುಷ್ಯನ ಜನ್ಮ ಸಿದ್ಧ ಹಕ್ಕು ಎಂಬ ವಿಚಾರವನ್ನು ಶ್ರೀ ಕಾಶಿ ಜ್ಞಾನಸಿಂಹಾಸನಾಧೀಶ್ವರ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಅವರು ನಗರದ ಸೊಗಸಗೇರಿಯ ಶ್ರೀ ಗುರುಶಾಂತಲಿAಗೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಮತ್ತು ವಚನ ಸಾಹಿತ್ಯ ಸಮನ್ವಯಾತ್ಮಕ ಧರ್ಮ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನದಲ್ಲಿ ದೀಕ್ಷಾ ಸಂಸ್ಕಾರವನ್ನು ಹೊಂದದೆ ಇಷ್ಟಲಿಂಗ ಪೂಜೆಯನ್ನು ಮಾಡುವ ಅಥವಾ ಮಹಾ ಮಂತ್ರದ ಜಪವನ್ನು ಮಾಡುವ ಅಧಿಕಾರವು ಯಾರಿಗೂ ಇರುವುದಿಲ್ಲ. ಅಂತೆಯೇ ಸನಾತನ ವೀರಶೈವ ಧರ್ಮದಲ್ಲಿ ಹೆಣ್ಣು ಗಂಡು ಎಂಬ ಭೇಧ ಭಾವ ಮಾಡದೆ ಪ್ರತಿಯೊಂದು ಮಕ್ಕಳಿಗೆ ಎಂಟನೇ ವರ್ಷಕ್ಕೆ ದೀಕ್ಷಾ ಸಂಸ್ಕಾರವನ್ನು ಕಡ್ಡಾಯಗೊಳಿಸಿದ್ದಾರೆ. ದೀಕ್ಷಾಪೂರ್ವಕವಾಗಿ ಬಂದ ಇಷ್ಟಲಿಂಗವನ್ನು ಶಿಷ್ಯರು ಪೂಜಿಸಬೇಕಾಗುತ್ತದೆ. ಲಿಂಗಪೂಜೆಯನ್ನು ಮಾಡುವುದಾಗಲಿ ಮಹಾಮಂತ್ರವನ್ನು ಜಪಿಸುವುದಾಗಲಿ ದೀಕ್ಷಾ ರಹಿತರಿಗೆ ಅಧಿಕಾರ ಇರುವುದಿಲ್ಲ. ಆದ್ದರಿಂದ ಎಲ್ಲಾ ಮಾನವರಿಗೆ ಈ ದೀಕ್ಷೆಯ ಅಧಿಕಾರವನ್ನು ಶ್ರೀ ಜಗದ್ಗುರು ಪಂಚಾಚಾರ್ಯರು ಅನುಗ್ರಹಿಸಿದ್ದಾರೆ. ದೀಕ್ಷೆ ಎಂದರೆ ಆಣವಾದಿ ಮಲಗಳನ್ನು ಕ್ಷಯಗೊಳಿಸುವ ಮತ್ತು ಶಿವ ಜ್ಞಾನವನ್ನು ಕೊಡುವ ದಿವ್ಯ ಸಂಸ್ಕಾರವೇ ದೀಕ್ಷೆಯು. ಈ ದೀಕ್ಷಾ ಸಂಸ್ಕಾರವು ಮೂರು ವಿಧವಾಗಿರುತ್ತದೆ. ಅವುಗಳೇ ವೇದಾ ದೀಕ್ಷೆ, ಮಂತ್ರದೀಕ್ಷೆ ಹಾಗೂ ಕ್ರಿಯಾ ದೀಕ್ಷೆಗಳು ವೇದಾದೀಕ್ಷೆಯಿಂದ ಆಣವ ಮಲದ ನಿವೃತ್ತಿ, ಮಂತ್ರ ದೀಕ್ಷೆಯಿಂದ ಮಾಯಾ ಮಲದ ನಿವೃತ್ತಿ ಮತ್ತು ಕ್ರಿಯಾ ದೀಕ್ಷೆಯಿಂದ ಶುಭಾಶುಭ ವಾಸನಾ ರೂಪದ ಕಾರ್ಮಿಕ ಮಲದ ನಿವೃತ್ತಿಯಾಗುವುದು, ಈ ದೀಕ್ಷಾ ಸಂಸ್ಕಾರಕ್ಕೆ ತಮ್ಮ ವಂಶಕ್ಕೆ ಒಬ್ಬರೇ ಗುರು ಇರಬೇಕೆಂಬ ನಿಯಮವು ಇದೆ. ಇದುವೇ ಧರ್ಮದ ಸದಾಚಾರವು ಆದಕಾರಣ ವಂಶದ ಪ್ರತಿಯೊಬ್ಬರು ತಮ್ಮ ವಂಶ ಗುರುಗಳಿಂದಲೇ ದೀಕ್ಷಾ ಸಂಸ್ಕಾರವನ್ನು ಪಡೆದು ಸದಾಚಾರವನ್ನು ಪಾಲಿಸುತ್ತ ತಪ್ಪದೇ ಇಷ್ಟಲಿಂಗ ಪೂಜೆಯನ್ನು ಮಾಡಬೇಕು ಎಂದು ಶ್ರೀ ಸನ್ನಿಧಿ ನುಡಿದರು.
ಕಡಗಂಚಿಯ ವೀರಭದ್ರ ಶಿವಾಚಾರ್ಯರಿಗೆ ಅವರ ಶಿಷ್ಯರಾದ ಶ್ರೀಮತಿ ಗೌರಮ್ಮ ಶಿವಾನಂದ ಸ್ಥಾವರಮಠ ರುದ್ರಾಕ್ಷಿ ಕೀರಿಟವನ್ನು ಅರ್ಪಿಸಿದರು. ಶಖಾಪೂರ ತಪೋವನಮಠದ ಡಾ.ಸಿದ್ಧರಾಮ ಶಿವಾಚಾರ್ಯರು, ಜೇವರ್ಗಿ (ಬಿ) ಜೈಗುರುಶಾಂತ ಲಿಂಗಾರಾಧ್ಯ ಶಿವಾಚಾರ್ಯರು, ಚೌದಾಪೂರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಮಾತನಾಡಿದರು. ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು, ಚಂದನಕೇರಾ, ಬಾರ್ಶಿ, ಸುಲೇಪೇಟ ಕಡಗಂಚಿ ಶ್ರೀಗಳು ಇದ್ದರು. ಆಳಂದ ತಾಲೂಕಿನ ಮಾಜಿ ಶಾಸಕರಾದ ಸುಭಾಷ ಗುತ್ತೇದಾರ ಮಾತನಾಡಿದರು. ಶಿವಶರಣಪ್ಪ ಸಿರಿ ವೇದಿಕೆಯ ಮೇಲೆ ಇದ್ದರು. ಗುರುಲಿಂಗಯ್ಯ ಹಿತ್ತಲಶಿರೂರ ಮಹಾಂತಯ್ಯ ಸ್ವಾಮಿ ನಿಂಗದಳ್ಳಿ ಇವರಿಂದ ಸಂಗೀತ ಜರುಗಿತು. ಈ.ಕೆ.ಎಸ್.ಆರ್.ಟಿ.ಸಿ ಮಾಜಿ ನಿರ್ದೇಶಕರಾದ ಮಲ್ಲಿಕಾರ್ಜುನ ತಡಕಲ್ ಸರ್ವರನ್ನು ಸ್ವಾಗತಿಸಿದರು. ಯುವ ಸಾಹಿತಿ ಶಿವಯ್ಯ ಮಠಪತಿ ನಿರೂಪಿಸಿದರು.