
ಭಾಲ್ಕಿ :ಜು.೨: ಸುಂದರ ಬದುಕಿಗೆ ದಾರಿ ದೀಪವಾಗಿರುವ ವಚನಗಳನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲೂಕಿನ ಬ್ಯಾಲಹಳ್ಳಿ(ಡಬ್ಲ್ಯೂ) ಗ್ರಾಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಬೀದರ್ ಸಹಯೋಗದಲ್ಲಿ ಮಂಗಳವಾರ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಂಪಾದಿಸಿದ ವಚನಾಮೃತ ಗ್ರಂಥ ಬಿಡುಗಡೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಚನಗಳಲ್ಲಿ ಬದುಕಿನ ಸಾರ ಅಡಗಿದೆ. ಪ್ರತಿಯೊಬ್ಬರು ಪ್ರತಿದಿನ ನಾಲ್ಕೈದು ವಚನ ಪಠಣ ಮಾಡಿದರೆ ಬದುಕು ಸುಂದರವಾಗಿ ರೂಪಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿAಗ ಕಾಮಣ್ಣ ಗ್ರಂಥ ಪರಿಚಯ ಮಾಡಿಕೊಟ್ಟರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ವಚನಾಮೃತ ಗ್ರಂಥ ಬಿಡುಗಡೆಗೊಳಿಸಿದರು.ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಂಥ ದಾಸೋಹಿಗಳಾದ ಸೋಮನಾಥ ಪಾಟೀಲ್, ಹಿರಿಯ ಸಾಹಿತಿ ವೀರಣ್ಣ ಕುಂಬಾರ ಸೇರಿದಂತೆ ಹಲವರು ಇದ್ದರು. ಮಂಗಲಾ ಸೋಮನಾಥ ಪಾಟೀಲ್ ಸ್ವಾಗತಿಸಿದರು. ರಾಜು ಜುಬರೆ ನಿರೂಪಿಸಿ ವಂದಿಸಿದರು.