
ಉಡುಪಿ | ಮಲ್ಪೆ ಬಂದರಿನಲ್ಲಿ ಎಲ್ಲರಿಗೂ ಸಮಾನವಾಗಿ ದುಡಿಯುವ ಹಕ್ಕಿದೆ. ಸರ್ವ ಜನರಿಗೂ ದುಡಿಯುವ ಹಕ್ಲು ಇದೆ. ಅಲ್ಲಿರುವ ಬಲಾಢ್ಯರು ಹಿರಿಯರು ಮಾಡಿದ ಬಂದರು ಎನ್ನುವಂತೆ ಭಾವಿಸಿ ಬಲಪ್ರಯೋಗ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಪಾಳೇಗಾರಿಕೆ ಪ್ರವೃತ್ತಿಯನ್ನು ಒಪ್ಪಲು ಖಂಡಿತ ಸಾಧ್ಯವಿಲ್ಲ ಎಂದು ದಲಿತ ಮುಖಂಡರಾದ ಸುಂದರ್ ಮಾಸ್ಟರ್ ಹೇಳಿದರು.
ಅವರು ಉಡುಪಿಯ ಅಜ್ಜರಕಾಡಿನಲ್ಲಿ “ಮಲ್ಪೆ ಬಂದರಿನಲ್ಲಿ ಶ್ರಮಿಕರ ಮೇಲಿನ ಗೂಂಡಾಗಿರಿ” ಖಂಡಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಇದು ಹೊಸತೇನಲ್ಲ ಎಂದು ಇಂತಹ ಘಟನೆಗಳನ್ನು ಸಾಮಾನ್ಯೀಕರಿಸುತ್ತ ಹೋದರೆ ಈ ಪರಿಸ್ಥಿತಿ ಇನ್ನಷ್ಟು ಬಿಗಾಡಾಯಿಸುತ್ತದೆ. ಇದರ ವಿರುದ್ಧ ಇನ್ನಷ್ಟು ಪ್ರಬಲವಾಗಿ ಹೋರಾಟ ಮಾಡಬೇಕು. ರಾಜಿ ಮಾಡುವ ಪ್ರವೃತ್ತಿ ನಿಲ್ಲಬೇಕು. ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದಾಗ ಶಾಸಕರು ಯಾಕೆ ಬರುವುದಿಲ್ಲ, ಮಾತನಾಡುವುದಿಲ್ಲ? ಅವರು ಒಂದು ಜನಾಂಗದ ಶಾಸಕರೇ ? ಶೇಖ್ ಅಯ್ಯೂಬ್ ಈ ದೇಶದ ಪ್ರಜೆಯಲ್ವಾ? ಎಂದು ಖಾರವಾಗಿ ಪ್ರಶ್ನಿಸಿದರು.
ಪ್ರಾಣಿಗಳಿಗೆ ಹೊಡೆದ ಹಾಗೆ ಕಾರ್ಮಿಕರಿಗೆ ಹೊಡೆಯವುದೆಂದರೆ ಏನು? ಅವರ ಪಾಳೇಗಾರಿಕೆ ಪ್ರವೃತ್ತಿ ಖಂಡಿತ ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಿ ಕಾರ್ಮಿಕರ ಮೇಲೆ ಹಲ್ಲೆಗಳು ನಡೆದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಆಯೋಜಿಸಬೇಕಾಗುತ್ತದೆ ಎಂದರು.
ನಂತರ ಮಾತನಾಡಿದ ಪ್ರೊ. ಫಣಿರಾಜ್, ಈ ಹೋರಾಟವು ಸಮಾನತೆಗಾಗಿ, ಬದುಕುವ ಹಕ್ಕಿನ ಹೋರಾಟವಾಗಿದೆ. ಶೇಖ್ ಅಯ್ಯೂಬ್ ಅವರದ್ದು ಒಂದು ಪ್ರಕರಣವಲ್ಲ ಇದರ ಹಿಂದೆ ರಾಜಕೀಯ ಹಿನ್ನೆಲೆ ಕೂಡ ಇದೆ. ಲಂಬಾಳಿ ಮಹಿಳೆ ಮೇಲೆ ನಡೆದ ಪ್ರಕರಣಕ್ಕೆ ಒಂದು ವರ್ಷವಾಗುವ ಮುನ್ನವೇ ಇನ್ನೊಂದು ಪ್ರಕರಣ ವರದಿಯಾಗಿದೆ. ಆ ಪ್ರಕರಣದಲ್ಲಿ ಹೊಡೆದು ವೀಡಿಯೋ ಮಾಡಿ ಹರಿಯ ಬಿಟ್ಟಿದ್ರು. ದಲಿತ ಸಂಘಟನೆಯ ಮುತುವರ್ಜಿಯಿಂದ ಪ್ರಕರಣ ದಾಖಲಿಸಿದ್ರು ಎಂದರು.
ಇದು ಕಾಂಗ್ರೆಸ್ ರಾಜಕೀಯ ಅಲ್ಲ, ಬಿಜೆಪಿ ರಾಜಕೀಯ ಅಲ್ಲ ಇದು ಹಲ್ಲೆ ಮಾಡಿದ ಮನಸ್ಥಿತಿಯ ವಿರುದ್ಧದ ಹೋರಾಟವಾಗಿದೆ. ಎಲ್ಲರಿಗೂ ನ್ಯಾಯ ಸಿಗಬೇಕು. ಪ್ರಕರಣ ದಾಖಲಾಗಿ ನ್ಯಾಯ ಸಿಗಬೇಕು ಆದರೆ ಪ್ರಜಾಪ್ರಭುತ್ವದ ರೀತಿಯಲ್ಲಿ ನ್ಯಾಯ ಸಿಗುವುದು ಅವರಿಗೆ ಬೇಕಾಗಿಲ್ಲ. ಅಲ್ಲಿ ರಾಜಕೀಯದ ಕೇಂದ್ರ ಮಾಡಿ ಫ್ಯಾಸಿಸ್ಟ್ ರಾಜಕೀಯಕ್ಕೆ ಬಂದರು ಪ್ರದೇಶವನ್ನು ಶಾಸಕರು ಬಳಸುತ್ತಿದ್ದಾರೆ ಇದು ನಿಜಕ್ಕೂ ಖಂಡನೀಯ. ಶ್ರಮಿಕರ ಮೇಲೆ ನಡೆದ ದೌರ್ಜನ್ಯ ಕೇವಲ ಅಪರಾಧ ಪ್ರಕರಣವಲ್ಲ, ಫ್ಯಾಸಿಸ್ಟ್ ದೌರ್ಜನ್ಯವಾಗಿದೆ ಎಂದರು. ಮಲ್ಪೆ ಬಂದರು ಪ್ರದೇಶದಲ್ಲಿ ಪೊಲೀಸ್ ಹೊರ ಠಾಣೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಇದ್ರಿಸ್ ಹೂಡೆ ಮಾತನಾಡಿ ಘಟನೆಯನ್ನು ಖಂಡಿಸಿದರು. ಸುರೇಶ್ ಕಲ್ಲಾಗರ ಅವರು ಪ್ರತಿಭಟನೆಯ ಬೇಡಿಕೆಯನ್ನು ಮುಂದಿಟ್ಟರು. ಕಾರ್ಮಿಕ ಮುಖಂಡ ಚಂದ್ರಶೇಖರ್ ದೇವಾಡಿಗ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಜುನಾಥ್ ಬಾಳ್ಕುದ್ರು, ಮಂಜುನಾಥ್ ಗಿಳಿಯಾರು, ಅಫ್ವಾನ್, ಶ್ಯಾಮರಾಜ್ ಬಿರ್ತಿ, ಜೆ ಶಂಕರ್, ಅಝೀಜ್ ಉದ್ಯಾವರ, ಇರ್ಷಾದ್ ನೇಜಾರು, ಶಶಿಧರ್ ಗೊಲ್ಲ, ಪೀರು ಸಾಹೇಬ್,ನಾಗೇಶ್ ಉದ್ಯಾವರ, ಸಯ್ಯದ್ ಫರೀದ್, ರಿಯಾಝ್ ಕೋಡಿ, ಡಾ.ಶಾಹಜನ್, ನಿಸಾರ್ ಉಡುಪಿ, ಅಬ್ದುಲ್ ಕಾದೀರ್ ಮೊಯ್ದಿನ್, ಚಂದ್ರ ಶೇಖರ್ ದೇವಾಡಿಗ, ಕೀರ್ತಿ ಶೆಟ್ಟಿ, ಹುಸೇನ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.























