
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಮೇ,14- ತಾಲೂಕಿನ ನಿಟ್ಟೂರು ಹಾಗೂ ತೆಕ್ಕಲಕೋಟೆ ಪಟ್ಟಣದ ‘ಗೌಡ್ರ ಮೂಲೆ’ ಪ್ರದೇಶಗಳಲ್ಲಿ ದೊರೆತ ಬಂಡೆಗಲ್ಲು ಶಾಸನ ಸ್ಥಳಕ್ಕೆ ಪುರಾತತ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಂಪಿ, ಕಮಲಾಪುರದ ರಾಜ್ಯ ಪುರಾತತ್ವ ಇಲಾಖೆಯ ಜಿಲ್ಲಾ ಪುರಾತತ್ವ ಸರ್ವೇಕ್ಷಣಾಧಿಕಾರಿ ಶೇಜೇಶ್ವರ ಆರ್ ನಾಯಕ ಈ ಸಂದರ್ಭದಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬಂಡೆಗಲ್ಲು ಶಾಸನದ ವರದಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಲಾಗಿದೆ’ ಎಂದರು.
ನಿಟ್ಟೂರಿನ ಅಶೋಕನ ಶಿಲಾಶಾಸನದ ಸುಕ್ರದಪ್ಪನ ಬೆಟ್ಟ ಬಳಿಯೇ ರಾಷ್ಟ್ರಕೂಟರ ಒಂದನೇ ಕೃಷ್ಣನ ಕಾಲದ ಈ ಮಹತ್ವದ ದಾಖಲೆ ದೊರೆತಿದೆ. ಅಲ್ಲದೆ ತೆಕ್ಕಲಕೋಟೆಯಲ್ಲಿ ಈಚೆಗೆ ನಡೆದ ಉತ್ಖನನ ಸ್ಥಳದ ಬಳಿಯ ಗೌಡ್ರ ಮೂಲೆಯಲ್ಲಿ ಮತ್ತೊಂದು ಬಂಡೆಗಲ್ಲು ಶಾಸನ ದೊರೆತಿರುವುದು. ಇದು ವಿಜಯನಗರ ಅಥವಾ ಪೂರ್ವದ ವಿಜಯನಗರ ಕಾಲದ ಕೆರೆ ನಿರ್ಮಾಣದ ಶಾಸನ ಎಂದು ತಿಳಿದು ಬಂದಿದೆ ಎಂದು ಸ್ಪಷ್ಟಪಡಿಸಿದರು.
ಬಂಡೆಗಲ್ಲು ಶಾಸನಗಳ ನೆರಳಿಗೆ ಚಾವಣಿ, ನಾಮಫಲಕ, ಸಂರಕ್ಷಣಾ ಕಟ್ಟೆ ಹಾಗೂ ಮಾಹಿತಿ ಫಲಕಗಳನ್ನು ಹಾಕಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಾತತ್ತ ಸಂರಕ್ಷಣೆ ಇಂಜನಿಯರ್ ಜೆ ಸತೀಶ್, ಸಿಬ್ಬಂದಿ ಹಾಗೂ ಇತಿಹಾಸ ಸಂಶೋಧನಾರ್ಥಿ ಮನೋಹರ ಸಿ.ಎಂ ಇದ್ದರು.























