
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.08 “ಕನಿಷ್ಠ ವೇತನ ಜಾರಿಗಾಗಿ ಹೋರಾಟ ಸಮಿತಿ” ಕರೆಯ ಮೇರೆಗೆ ರಾಜ್ಯವ್ಯಾಪಿ ಗುತ್ತಿಗೆ ಕಾರ್ಮಿಕರ ಪತ್ರ ಚಳುವಳಿಗೆ ಬಳ್ಳಾರಿಯಲ್ಲಿ ಚಾಲನೆ ನೀಡಲಾಯಿತು. ಎಐಯುಟಿಯುಸಿ ಗೆ ಸಂಯೋಜಿತಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ(ರಿ) ಸದಸ್ಯರು ಈ ಚಳುವಳಿಯಲ್ಲಿ ಭಾಗವಹಿಸಿದ್ದರು.
ಪತ್ರವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಬರೆಯಲಾಗಿದೆ.
ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕನಿಷ್ಠ ವೇತನದ ಪರಿಷ್ಕರಣೆ ಕೊನೆಗೂ ಮೇ 22 ರಂದು ಜಾರಿಗೊಂಡಿದ್ದು ನಮ್ಮೆಲರ ಮುಖದಲ್ಲಿ ಮಂದಹಾಸವನ್ನು ಮೂಡಿಸಿತ್ತು. ಸಮಸ್ತ ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಾದ ನಾವು ರಾಜ್ಯ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದೆವು, ಆದರೆ ತಾವು ರಾಜ್ಯದ ಚುಕ್ಕಾಣಿ ಹಿಡಿದ ತರುವಾಯ ಪರಿಷ್ಕೃತ ವೇತನ ಕ್ಯಾಬಿನೆಟ್ ಉಪ ಸಮಿತಿಯನ್ನು ರಚಿಸಿ ನಮ್ಮ ಹೊಟ್ಟೆ ಮೇಲೆ ಹೊಡೆದಿದ್ದೀರಿ ತೀವ್ರ ಬೆಲೆ ಏರಿಕೆಯ ಈ ದಿನಮಾನಗಳಲ್ಲಿ ಶಾಸನಬದ್ಧವಾದ ಹೆಚ್ಚಳವನ್ನು ತಡೆಹಿಡಿದಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಈ ಕೂಡಲೇ ತಾವು ಪರಿಸ್ಕೃತ ಹೊಸ ವೇತನ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾವು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. – ಇಂತಿ ನೊಂದ ಕಾರ್ಮಿಕರು.
ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ. ಪ್ರಮೋದ್ ಮಾತನಾಡುತ್ತ ” ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಸರ್ಕಾರ ಕಿತ್ತುಕೊಂಡಿದೆ. ಇದನ್ನು ಕಾರ್ಮಿಕರು ಎಂದಿಗೂ ಸಹಿಸುವುದಿಲ್ಲ, ದೊಡ್ಡ ಮಟ್ಟದ ಹೋರಾಟಕ್ಕೆ ಎಲ್ಲಾ ಗುತ್ತಿಗೆ ಕಾರ್ಮಿಕರು ತಯಾರಾಗಬೇಕು. ಪ್ರಸ್ತುತ ಈ ಪತ್ರ ಚಳುವಳಿಯಲ್ಲಿ ಎಲ್ಲಾ ಗುತ್ತಿಗೆ ಕಾರ್ಮಿಕರು ಭಾಗವಹಿಸಿ ಯಶಸ್ವಿ ಗೊಳಿಸಬೇಕು. ಲಕ್ಷಾಂತರ ಪತ್ರಗಳು ಮುಖ್ಯಮಂತ್ರಿಗಳಿಗೆ ತಲುಪಲಿ ಎಂದು ಕರೆನೀಡಿದರು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎ.ದೇವದಾಸ್, ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸುರೇಶ್. ಜಿ. ಮುಖoಡರಾದ ಕಿರಣ್ ಕುಮಾರ್, ಮುರಳಿ ಕೃಷ್ಣ, ಚೇತನ್, ಅಶ್ವಿನಿ, ಖಜಾಸಾಬ್, ಲಕ್ಷ್ಮಿ, ಶಾರದಾ, ನಾಗೇಶಯ್ಯ, ಭಾಗಿಯಾಗಿದ್ದರು.























