Home ಜಿಲ್ಲೆ ಕೊಳಗಲ್ಲು ಗ್ರಾಮದಲ್ಲಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಆರೋಪ

ಕೊಳಗಲ್ಲು ಗ್ರಾಮದಲ್ಲಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಆರೋಪ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜೂ.05:  ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸ್  ಸಿಬ್ಬಂದಿ ಮೇಲೆ ರಾಡು, ದೊಣ್ಣೆಗಳಿಂದ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ನಡೆದಿದೆ.

ಕಳೆದ ಒಂದು ತಿಂಗಳ ಹಿಂದೆ ಕೊಳಗಲ್ಲು ಗ್ರಾಮದ ಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ  ಗ್ರಾಮ ಪಂಚಾಯ್ತಿ  ಮಾಜಿ ಅಧ್ಯಕ್ಷ ಹುಲಿಯಪ್ಪನವರ ಮೇಲೂ ಹಲ್ಲೆ ನಡೆದಿತ್ತು. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಎರಡೂ ಕಡೆಯವರು ಪರಸ್ಪರ ದೂರು ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಕೆಲವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸರು ಕೈಗೆತ್ತಿಕೊಂಡಿದ್ದರು.

ಈ ಪ್ರಕರಣದ ಆರೋಪಿ ಅನಿಲ್ನನ್ನು ಬಂಧಿಸುವ ಉದ್ದೇಶದಿಂದ ನಿನ್ನೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಸಿಬ್ಬಂದಿಗಳಾದ ವೀರೇಶ್ ಬಾಬು ಹಾಗೂ ಪಾಂಡು ಅವರು ಕೊಳಗಲ್ಲು ಗ್ರಾಮಕ್ಕೆ ತೆರಳಿದ್ದರು. ಆರೋಪಿಯನ್ನು ಮನೆಯಲ್ಲೇ ವಶಕ್ಕೆ ಪಡೆದ ಬಳಿಕ ಠಾಣೆಗೆ ಕರೆತರಲು ಸಿದ್ದರಾಗಿದ್ದರು.

ಈ ವೇಳೆ ಗ್ರಾಮದ ಭೀಮ ಸೇರಿದಂತೆ ಹಲವರು ಆರೋಪಿ ಭೀಮನನ್ನು ತಾವೇ ಠಾಣೆಗೆ ಕರೆತರುವುದಾಗಿ ಹೇಳಿದ್ದಾರೆ. ನಂತರ ಕೆಲ ಮಹಿಳೆಯರು ಹಾಗೂ ಪುರುಷರು ಸೇರಿ ಪೊಲೀಸರ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು  ಪೊಲೀಸ್ ಪೇದೆ ವೀರೇಶ್ ಬಾಬು ಅವರ ಮೇಲೆ ಹಲ್ಲೆ ನಡೆಸಲಾಗಿದೆ  ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

10 ಜನರ ಮೇಲೆ ಕೇಸು.

ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಹತ್ತುಜನರ ವಿರುದ್ಧ ಪ್ರಕರಣ ದಾಖಲಾಗಿದೆ.  ಹಲ್ಲೆ ಮಾಡಿದ  ಆರೋ ಪಿಗಳನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.