Home ಜಿಲ್ಲೆ ಮೈಸೂರು ಕಾರ್ಮಿಕರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಕಾರ್ಮಿಕರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು: ಏ.22:-
ಕಾರ್ಮಿಕರ ಮೇಲಿನ ದೌರ್ಜನ್ಯ ಖಂಡಿಸಿ, ರಾಜ್ಯದಲ್ಲೂ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಎಐಯುಟಿಯುಸಿ ವತಿಯಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಯಶೋಧರ್ ಮಾತನಾಡಿ, ಏ.9ರಂದು ನೋಯ್ಡಾ ಫೇಸ್-2 ಪ್ರದೇಶದ ಸುಮಾರು 50 ಸಾವಿರ ಕಾರ್ಮಿಕರು ಹಾಗೂ ಎನ್‍ಸಿಆರ್‍ನ ಅನೇಕ ಕೈಗಾರಿಕಾ ವಲಯಗಳ ಕಾರ್ಮಿಕರು ತಮ್ಮ ನ್ಯಾಯಸಮ್ಮತ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದರು. ಈ ಹೋರಾಟ ತಕ್ಷಣವೇ ಹರಿಯಾಣ, ರಾಜಸ್ಥಾನ, ಗುಜರಾತ್, ಬಿಹಾರ ಸೇರಿದಂತೆ ದೇಶದ ಹಲವಾರು ಕೈಗಾರಿಕಾ ಕೇಂದ್ರಗಳಿಗೆ ವ್ಯಾಪಿಸಿದೆ. ಕಾರ್ಮಿಕರು ವೇತನ ಹೆಚ್ಚಳ, ದುಬಾರಿ ದರದಿಂದ ಉಂಟಾದ ಸಂಕಷ್ಟಕ್ಕೆ ಪರಿಹಾರ, ಅತಿಯಾದ ಕೆಲಸದ ಗಂಟೆಗಳ ವಿರುದ್ಧ, ಕಾನೂನುಬದ್ದ ಓವರ್‍ಟೈಮ್, ವಾರದ ವಿಶ್ರಾಂತಿ, ಇಎಸ್‍ಐ, ಪಿಎಫ್, ಬೋನಸ್, ಉದ್ಯೋಗ ಭದ್ರತೆ, ಸುರಕ್ಷತಾ ಸೌಲಭ್ಯ, ಗುತ್ತಿಗೆ ಕಾರ್ಮಿಕರ ಕಾಯಮಾತಿ ಸೇರಿದಂತೆ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಜತೆಗೆ, ಕಾರ್ಮಿಕರ ಹಕ್ಕುಗಳನ್ನು ಕುಂಠಿತಗೊಳಿಸುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಗಟ್ಟಿಯಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಕಾರ್ಮಿಕರ ಅಸಮಾಧಾನ ಮತ್ತು ಬದುಕಿನ ಸಂಕಷ್ಟವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಹಿನ್ನಲೆಯಲ್ಲಿ ದೇಶವ್ಯಾಪಿ ಕಾರ್ಮಿಕರು ಹೋರಾಟ ಕಾರ್ಮಿಕರು ಸಜ್ಜಾಗಬೇಕು, ನೋಯ್ಡಾ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಕರೆ ನೀಡಿದರು.


ಜಿಲ್ಲಾ ಜಂಟಿ ಕಾರ್ಯದರ್ಶಿ ಕಾ.ಮುದ್ದುಕೃಷ್ಣ ಮಾತನಾಡಿ, ನ್ಯಾಯಸಮ್ಮತ ಬೇಡಿಕೆಗಳನ್ನು ಪರಿಹರಿಸುವ ಬದಲು ಸಂಬಂಧಿತ ರಾಜ್ಯ ಸರ್ಕಾರಗಳು ಕಾರ್ಮಿಕರ ಮೇಲೆ ನಿರ್ದಯ ದಮನ ನಡೆಸುತ್ತಿವೆ. ಕಾರ್ಮಿಕರನ್ನು ಹೊಡೆದು ಗಾಯಗೊಳಿಸುವುದು, ಬಂಧಿಸುವುದು, ಆಹಾರ, ನೀರು ಇಲ್ಲದೆ ಬಂಧನದಲ್ಲಿಡಲಾಗುತ್ತಿದೆ. ಇವುಗಳೆಲ್ಲಾ ಸರ್ಕಾರದ ದೌರ್ಜನ್ಯ, ಕ್ರೂರತೆಯ ಸ್ಪಷ್ಟ ಉದಾಹರಣೆಗಳು. ಬಡ ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕಾದ ಸರ್ಕಾರವೇ ಅವರ ವಿರುದ್ಧ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದರು.


ಬೇಡಿಕೆಗಳು: ಕಾರ್ಮಿಕರ ಮೇಲಿನ ಎಲ್ಲಾ ದಮನಾತ್ಮಕ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು. ಬಂಧಿತ ಎಲ್ಲಾ ಕಾರ್ಮಿಕರನ್ನು ಬಿಡುಗಡೆ ಮಾಡಬೇಕು. ಗಾಯಗೊಂಡ ಕಾರ್ಮಿಕರಿಗೆ ಸಮರ್ಪಕ ಪರಿಹಾರ ನೀಡಬೇಕು. ಕಾರ್ಮಿಕರ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಮುಖಂಡರಾದ ಸಂಧ್ಯಾ.ಪಿ.ಎಸ್, ಹರೀಶ್, ಶಿವಾನಂದ್ ಸೇರಿದಂತೆ ಹಲವರು ಭಾಗವಹಿಸಿದ್ದರು.