
ಸುಳ್ಯ:ಮಹಿಳೆಯರು ಮನೆಯಿಂದ ಹೊರಬಂದರೂ, ಹಲವಾರು ಮಹಿಳೆಯರು ಇಂದಿಗೂ ಶಿಕ್ಷಣ ಮತ್ತು ಮಾಹಿತಿಯ ಕೊರತೆಯಿಂದ ಸಮಾಜದ ಮುಖ್ಯ ವಾಹಿನಿಗೆ ಬರಲು ಅಸಾಧ್ಯವಾಗಿದೆ. ತಾಯಿ ತನ್ನ ಮಗುವಿಗೆ ಶಿಕ್ಷಣ ನೀಡುವುದರ ಜೊತೆಗೆ ಆರೋಗ್ಯ ಮತ್ತು ಜವಾಬ್ದಾರಿಯ ಅರಿವನ್ನು ನೀಡಬೇಕು ಎಂದು ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಪುಷ್ಪಾ ಡಿ. ಪ್ರಸಾದ್ ಹೇಳಿದರು.
ಅವರು ಆಲೆಟ್ಟಿಯ ಕಸ್ತೂರಿಬಾ ಮಹಿಳಾ ಮಂಡಲದ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಮಂಡಲದ ಅಧ್ಯಕ್ಷೆ ಜಲಜಾಕ್ಷಿ ಮಹಾಬಲ ಆಲೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ವನಜಾಕ್ಷಿ ಟೀಚರ್ ಆಲೆಟ್ಟಿ, ಶೋಭಾ ಯೋಗೀಶ್ ಗುಂಡ್ಯ, ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಜಯಲಕ್ಷ್ಮಿ ಜನಾರ್ಧನ ನಾರ್ಕೋಡು, ಜಿಲ್ಲಾ ಒಕ್ಕೂಟದ ಸದಸ್ಯೆ ಯಶೋಧ ಕುಡೆಕಲ್ಲು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರಾದ ಕಮಲ ಕಾರ್ಯಪ್ಪ ಕುಡೆಕಲ್ಲು ಅವರನ್ನು ಗೌರವವಿಸಲಾಯಿತು. ಕಾರ್ಯದರ್ಶಿ ಸರೋಜಿನಿ ಬಾರ್ಪಣೆ ಸ್ವಾಗತಿಸಿ, ನಿರ್ದೇಶಕಿ ರೋಹಿಣಿ ಕುಡೆಕಲ್ಲು ವಂದಿಸಿದರು.
























