
ಅಭಿಜಿತ್ ಎಂಟ್ರಿ, ಸ್ಪೆಷಲ್ ಸಾಂಗ್
ಬಿಡುಗಡೆಗೆ ಸಜ್ಜಾಗಿರುವ ‘ಶಿಲ್ಪಾ ಶ್ರೀನಿವಾಸ್’ ಸಿನಿಮಾಗೆ ಈಗ ಹೊಸ ಚೈತನ್ಯ ಸೇರಿದೆ. ಚಿತ್ರಕ್ಕೆ ಈಗಷ್ಟೆ ಸೇರಿಸಿರುವ ವಿಶೇಷ ಹಾಡಿನಲ್ಲಿ ಹಿರಿಯ ನಟ ಅಭಿಜಿತ್ ಸ್ಟೆಪ್ ಹಾಕುತ್ತಿದ್ದು, ಈ ಸಾಂಗ್ ಸಿನಿಮಾ ಹೈಲೈಟ್ ಆಗಲಿದೆ.
“ಈ ಸಿನಿಮಾ ಅಂತೀವಲ್ಲಾ ಅದು ದೊಡ್ಡ” ಎಂಬ ಕ್ಯಾಚಿ ಸಾಲುಗಳಿಂದ ಆರಂಭವಾಗುವ ಹಾಡಿಗೆ ಪ್ರತಾಪ್ ಭಟ್ ಸಾಹಿತ್ಯ, ಅನಿರುದ್ಧ ಶಾಸ್ತ್ರಿ ಸಂಗೀತ ಹಾಗೂ ಗಾಯನ ನೀಡಿದ್ದಾರೆ.
ಹಾರರ್-ಥ್ರಿಲ್ಲರ್ ಹಿನ್ನೆಲೆಯ ಜೊತೆ ಸಿನಿಮಾ ಇಂಡಸ್ಟ್ರಿಯ ಒಳಗಿನ ನಿಜ ಮುಖವನ್ನು ತೆರೆದಿಡುವ ಕಥೆಯನ್ನೊಳಗೊಂಡ ಈ ಚಿತ್ರ, ಈಗಾಗಲೇ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸೆನ್ಸಾರ್ ಹಂತ ತಲುಪಿದೆ. ಫಸ್ಟ್ ಕಾಪಿ ವೀಕ್ಷಣೆಯ ಬಳಿಕ ನಿರ್ದೇಶಕ ರಾಜೀವ್ ಕೃಷ್ಣ ಇನ್ನೊಂದು ಹಾಡು ಸೇರಿಸುವ ನಿರ್ಧಾರ ಕೈಗೊಂಡಿದ್ದು, ಅದೇ ಈ ಸ್ಪೆಷಲ್ ಸಾಂಗ್.
ಇದೀಗ ಚಿತ್ರದಲ್ಲಿ ಮೂರು ಹಾಡುಗಳು, ಎರಡು ಫೈಟ್ ಸೀಕ್ವೆನ್ಸ್ಗಳಿದ್ದು, ಮೇ ಕೊನೆಯಲ್ಲಿ ರಿಲೀಸ್ ಮಾಡುವ ಪ್ಲಾನ್ ಇದೆ.
ಶಿಲ್ಪಾ ಶ್ರೀನಿವಾಸ್ ಅವರೇ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಶೋಭರಾಜ್, ನಾಗೇಂದ್ರ ಅರಸ್, ಶಂಖನಾದ ಆಂಜಿನಪ್ಪ, ಅನ್ನಪೂರ್ಣ, ನಂದಿನಿ ಕಮ್ಮಯ್ಯ, ಪಂಚಾಕ್ಷರಯ್ಯ ಮರಿಸ್ವಾಮಿ, ವೀರ ಧನುಷ್, ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಬೆಂಗಳೂರು ಮನು, ಪ್ರಿಯ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಸಂಗೀತ, ಪ್ರತಾಪ್ ಭಟ್ ಸಾಹಿತ್ಯ, ಕೆ. ಮಲ್ಲಿ ವಡ್ಡರಹಟ್ಟಿ ಸಹ ನಿರ್ದೇಶನ, ಡಿ. ಮಲ್ಲಿ ಸಂಕಲನ ಹಾಗೂ ಸಾನ್ವಿ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.






















