
ಕಲಾವಿದನಿಗೆ ಅಂತರರಾಷ್ಟ್ರೀಯ ಗೌರವ
ಬಹುಮುಖ ಪ್ರತಿಭೆಯ ನಟ ಕಮಲ್ ರಾಜ್ (ಕಲೀಂ ಪಾಷ) ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಮಲ್ ರಾಜ್, ಕಳೆದ ಎರಡೂವರೆ ದಶಕಗಳಿಂದ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ನೂರಕ್ಕೂ ಹೆಚ್ಚು ಸಂಗೀತ ಆಲ್ಬಮ್ಗಳನ್ನು ನಿರ್ಮಿಸಿ, ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.
ಆಧ್ಯಾತ್ಮ, ಪ್ರೀತಿ, ಜೀವನ ಮತ್ತು ಮಾನವೀಯತೆ ಕುರಿತಾಗಿ ಐದು ಸಾವಿರಕ್ಕೂ ಅಧಿಕ ಶಾಯರಿಗಳನ್ನು ರಚಿಸಿರುವ ಅವರು, ಅದನ್ನು ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಭಾಷೆ ಮತ್ತು ಕಲೆಯ ಮೂಲಕ ಸಮಾಜದಲ್ಲಿ ಅಭಿವ್ಯಕ್ತಿಯನ್ನು ಮೂಡಿಸುವ ಅವರ ಪ್ರಯತ್ನಕ್ಕೆ ಇದೀಗ ವಿಶ್ವ ಮಟ್ಟದ ಮಾನ್ಯತೆ ಸಿಕ್ಕಿದೆ.
ಇತ್ತೀಚೆಗೆ ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ವತಿಯಿಂದ ಅಧಿಕೃತವಾಗಿ ಪ್ರಮಾಣಪತ್ರ ನೀಡಿ ಕಮಲ್ ರಾಜ್ ಅವರನ್ನು ಗೌರವಿಸಲಾಯಿತು.
ಈ ಗೌರವದ ಬಗ್ಗೆ ಮಾತನಾಡಿದ ಕಮಲ್ ರಾಜ್, “ನಮ್ಮ ಕೆಲಸಗಳು ಇತರರಿಗೆ ಉಪಯೋಗವಾಗಬೇಕು, ಪ್ರೇರಣೆಯಾಗಬೇಕು ಎಂಬುದು ನನ್ನ ಆಶಯ. ಬಹುಶಃ ಅದೇ ದಾರಿಗೆ ಸಿಕ್ಕ ಫಲ ಈ ಗುರುತಿನ ರೂಪದಲ್ಲಿ ಬಂದಿದೆ. ಮುಂದೆಯೂ ನನ್ನ ಕಲಾ ಸೇವೆ ನಿರಂತರವಾಗಿರಲಿದೆ” ಎಂದು ತಿಳಿಸಿದ್ದಾರೆ.






















