Home ಜಿಲ್ಲೆ ಮೈಸೂರು ಮಾರ್ಕೆಟ್, ಲ್ಯಾನ್ಸ್‍ಡೌನ್ ಬಿಲ್ಡಿಂಗ್ ನವೀಕರಣಗೊಳಿಸಿ

ಮಾರ್ಕೆಟ್, ಲ್ಯಾನ್ಸ್‍ಡೌನ್ ಬಿಲ್ಡಿಂಗ್ ನವೀಕರಣಗೊಳಿಸಿ

ಸಂಜೆವಾಣಿ ನ್ಯೂಸ್
ಮೈಸೂರು: ಮೇ.10:-
ನಗರದ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಕಟ್ಟಡ ಮತ್ತು ಲ್ಯಾನ್ಸ್ ಡೌನ್ ಕಟ್ಟಡವನ್ನು ಸಂರಕ್ಷಣೆ ಮಾಡುವಂತೆ ಆದೇಶಿಸಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ದೇವರಾಜ ಮಾರುಕಟ್ಟೆ ನವೀರಣಕ್ಕೆ ಮುಂದಾಗಬೇಕು ಎಂದು ದೇವರಾಜ ಮಾರುಕಟ್ಟೆ ಮಳಿಗೆದಾರರ ಸಂಘದ ಅಧ್ಯಕ್ಷ ಮಹದೇವು ಒತ್ತಾಯಿಸಿದ್ದಾರೆ.


ಮೈಸೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆ ಶುಕ್ರವಾರ ಮಾತನಾಡಿರುವ ಅವರು, ನ್ಯಾಯಾಲಯ ಕಡೆಗೂ ನ್ಯಾಯ ದೊರಕಿಸಿಕೊಟ್ಟಿದೆ. ಈಗಲಾದರೂ ಸರ್ಕಾರ ಹಂತ ಹಂತವಾಗಿ ದೇವರಾಜ ಮಾರುಕಟ್ಟೆ ನವೀಕರಣ ಕಾರ್ಯ ಮಾಡಬೇಕು ಎಂದರು.


ಮಾರುಕಟ್ಟೆಯ ಒಂದು ಭಾಗದ ಮುಖ್ಯದ್ವಾರದ ಕಟ್ಟಡವನ್ನು ಅತ್ಯಂತ ವ್ಯವಸ್ಥಿತವಾಗಿ ಅಧಿಕಾರಿ ವರ್ಗ ಕೆಡವಿ ಹಾಕಿತು. ಆ ಬಳಿಕ ಮಾರುಕಟ್ಟೆಯ ಇಡೀ ಕಟ್ಟಡ ಶಿಥಿಲವಾಗಿದೆ ಎಂಬ ನೆಪವೊಡ್ಡಿ ನೆಲಸಮ ಮಾಡುವ ಹುನ್ನಾರ ನಡೆಯಿತು. ಆದರೀಗ ಸುಪ್ರೀಂಕೋರ್ಟ್ ಸೂಕ್ತ ಆದೇಶ ನೀಡಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆ ದೇವರಾಜ ಮಾರುಕಟ್ಟೆ ನವೀರಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಏನದು ಕೋರ್ಟ್ ಆದೇಶ: ಮೈಸೂರಿನ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆ ಪುನರ್ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು. ಕಟ್ಟಡಗಳ ಪಾರಂಪರಿಕತೆಗೆ ಧಕ್ಕೆಯಾಗದಂತೆ ಕಟ್ಟಡಗಳ ನವೀಕರಣ ಮಾಡುವಂತೆ ಆದೇಶಿಸಿದೆ. 14 ವರ್ಷಗಳ ಹಿಂದೆ ಲ್ಯಾನ್ಸ್ ಡೌನ್ ಬಿಲ್ಡಿಂಗ್ ನಲ್ಲಿರುವ ಒಂದು ಮಳಿಗೆಯ ಚಾವಣಿ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಘಟನೆ ಬಳಿಕ ಕಟ್ಟಡದಲ್ಲಿದ್ದ ಎಲ್ಲಾ ಮಳಿಗೆದಾರರನ್ನು ಸರ್ಕಾರ ಖಾಲಿ ಮಾಡಿಸಿ, ಎದುರಿನ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿತ್ತು. ಹಾಗೆಯೇ ಎಂಟು ವರ್ಷಗಳ ಹಿಂದೆ ದೇವರಾಜ ಮಾರುಕಟ್ಟೆ ಉತ್ತರ ದಿಕ್ಕಿನ ದ್ವಾರದಲ್ಲಿ ಸ್ವಾಗತ ಕಮಾನು ಕುಸಿದಿತ್ತು. ಇದರಿಂದ ಎರಡೂ ಕಟ್ಟಡ ಶೀಥಿಲಗೊಂಡಿದ್ದು, ಅವುಗಳನ್ನು ನೆಲಸಮ ಮಾಡಿ, ಅದೇ ಮಾದರಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು.


ಇದನ್ನು ಪ್ರಶ್ನಿಸಿ ಕೆಲವರು ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ನ್ಯಾಯಾಲಯ ಎರಡೂ ಕಟ್ಟಡಗಳನ್ನು ಸಂರಕ್ಷಿಸಬಹುದೇ ಅಥವಾ ಪುನರ್ ನಿರ್ಮಾಣ ಮಾಡಬೇಕೆ ಎಂಬುದನ್ನು ತಿಳಿಯಲು ಐಐಟಿ ರೂರ್ಕಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಕಳೆದ ವರ್ಷ ಐಐಟಿ ರೂರ್ಕಿಯ ಉಮೇಶ್ ಕುಮಾರ್ ಶರ್ಮಾ ನೇತೃತ್ವದ ತಂಡ ಅವಳಿ ಕಟ್ಟಡವನ್ನು ತಾಂತ್ರಿಕವಾಗಿ ಪರಿಶೀಲನೆ ನಡೆಸಿತ್ತು. ಈ ವೇಳೆ ಕಟ್ಟಡದ ಗಾರೆಯ ಮಾದರಿ, ಅಡಿಪಾಯದ ಮಣ್ಣು, ಇಟ್ಟಿಯನ್ನು ಸಂಗ್ರಹಿಸಿಕೊಂಡು ತೆರಳಿತ್ತು.


ಬಳಿಕ ತನ್ನ ವರದಿಯನ್ನು ಸುಪ್ರಿಂಕೋರ್ಟ್‍ಗೆ ಐಐಟಿ ರೂರ್ಕಿಯ ತಜ್ಞರ ತಂಡ ನೀಡಿತ್ತು. ಈ ವರದಿಯನ್ನು ಆಧರಿಸಿ ಅವಳಿ ಕಟ್ಟಡವನ್ನು ನವೀಕರಣ ಮಾಡಿ ಸಂರಕ್ಷಿಸುವಂತೆ ಆದೇಶಿಸಿದೆ.