Home ಜಿಲ್ಲೆ ಮಂಗಳೂರು ಮಂಗಳೂರು-ಬೆಂಗಳೂರು ರೈಲುಗಳ ವೇಳಾಪಟ್ಟಿ ಬದಲಾವಣೆ; ಹಳೆ ವೇಳಾಪಟ್ಟಿ ಮರುಸ್ಥಾಪನೆಗೆ ಸಂಸದ ಕ್ಯಾ. ಚೌಟ ಆಗ್ರಹ

ಮಂಗಳೂರು-ಬೆಂಗಳೂರು ರೈಲುಗಳ ವೇಳಾಪಟ್ಟಿ ಬದಲಾವಣೆ; ಹಳೆ ವೇಳಾಪಟ್ಟಿ ಮರುಸ್ಥಾಪನೆಗೆ ಸಂಸದ ಕ್ಯಾ. ಚೌಟ ಆಗ್ರಹ

ಮಂಗಳೂರು-ಮಂಗಳೂರು ರೈಲ್ವೆ ವಲಯವನ್ನು ಮೈಸೂರು ವಿಭಾಗಕ್ಕೆ ಸೇರಿಸಿದ ಬೆನ್ನಲ್ಲೇ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಪ್ರಕಟವಾಗಿದ್ದು, ಇದು ಕರಾವಳಿ ಭಾಗದ ರೈಲು ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಂಗಳೂರು ಮತ್ತು ಬೆಂಗಳೂರು ನಡುವೆ ಸಂಚರಿಸುವ ಪ್ರಮುಖ ಹಗಲು ವೇಳೆಯ ರೈಲುಗಳ ಸಮಯ ಬದಲಾವಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಯಶವಂತಪುರ-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ಪ್ರವೇಶಿಸದೆ ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲು ನಿರ್ಧರಿಸಲಾಗಿದ್ದು, ಇದರೊಂದಿಗೆ ಕರಾವಳಿಯನ್ನು ಬೆಂಗಳೂರಿಗೆ ಸಂಪರ್ಕಿಸುವ ಹಗಲು ವೇಳೆಯ ರೈಲುಗಳ ಸಮಯ ಬದಲಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬದಲಾದ ರೈಲು ವೇಳಾಪಟ್ಟಿ ಮಾಹಿತಿ:
ಗೋಮಟೇಶ್ವರ ಎಕ್ಸ್‌ಪ್ರೆಸ್ (೧೬೫೭೬/೧೬೫೪೦): ಈ ಹಿಂದೆ ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ ೭ ಗಂಟೆಗೆ ಹೊರಡುತ್ತಿದ್ದ ರೈಲು, ಇನ್ಮುಂದೆ ಬೆಳಗ್ಗೆ ೧೧:೪೦ ಕ್ಕೆ ಹೊರಡಲಿದೆ. ಯಶವಂತಪುರ ತಲುಪುವ ಸಮಯವನ್ನು ಸಂಜೆ ೪:೩೦ ರ ಬದಲಾಗಿ ರಾತ್ರಿ ೧೦:೧೫ ಕ್ಕೆ ನಿಗದಿಪಡಿಸಲಾಗಿದೆ.
ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್ (೧೬೫೭೫/೧೬೫೩೯): ಯಶವಂತಪುರದಿಂದ ಮಂಗಳೂರು ಕಡೆಗೆ ಸಂಚರಿಸುವ ಈ ರೈಲು ಇನ್ಮುಂದೆ ಸಂಜೆ ೪:೨೫ ರ ಬದಲಿಗೆ ೫ ಗಂಟೆಗೆ ಪಡೀಲ್ ಹಾಗೂ ೪:೪೦ ರ ಬದಲಿಗೆ ಸಂಜೆ ೫:೧೦ ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ (೧೬೫೧೫): ಪಡೀಲ್ ತಲುಪುವ ಸಮಯ ಸಂಜೆ ೪:೨೫ ರಿಂದ ೫ ಗಂಟೆಗೆ ಹಾಗೂ ತೋಕೂರು ತಲುಪುವ ಸಮಯ ೫:೪೫ ರಿಂದ ಸಂಜೆ ೬:೨೦ ಕ್ಕೆ ಬದಲಾಗಿದೆ. ಕಾರವಾರ ತಲುಪುವ ಸಮಯವನ್ನು ರಾತ್ರಿ ೧೦:೪೫ ರ ಬದಲಾಗಿ ೧೧:೩೦ ಕ್ಕೆ ನಿಗದಿಪಡಿಸಲಾಗಿದೆ.
ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ (೧೬೫೧೬): ಈ ರೈಲು ಯಶವಂತಪುರ ತಲುಪುವ ಸಮಯ ರಾತ್ರಿ ೮:೫೦ ರಿಂದ ರಾತ್ರಿ ೧೦:೧೫ ಕ್ಕೆ ಬದಲಾವಣೆಯಾಗಿದೆ.
ಸಾಮಾನ್ಯ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರಯಾಣಿಕರಿಗೆ ಕೈಗೆಟುಕುವ ವೆಚ್ಚದಲ್ಲಿ ಬೆಂಗಳೂರಿಗೆ ಪ್ರಯಾಣಿಸಲು ನೆರವಾಗುತ್ತಿದ್ದ ಹಗಲು ವೇಳೆಯ ರೈಲಿನ ಸಮಯ ಬದಲಾಯಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದುಬಾರಿ ದರದ ವಂದೇ ಭಾರತ್ ಸೇವೆ ಆರಂಭವಾಗುತ್ತಿರುವ ಬೆನ್ನಲ್ಲೇ ಸಾಮಾನ್ಯ ರೈಲಿನ ವೇಳಾಪಟ್ಟಿ ಬದಲಿಸಿರುವುದು ರೈಲ್ವೆ ಇಲಾಖೆಯ ಉದ್ದೇಶವನ್ನು ಪ್ರಶ್ನಿಸುವಂತೆ ಮಾಡಿದೆ.
ರಾತ್ರಿ ೧೦:೧೫ ಕ್ಕೆ ಬೆಂಗಳೂರು ತಲುಪುವ ಪ್ರಯಾಣಿಕರು ತಮ್ಮ ತಲುಪಬೇಕಾದ ಸ್ಥಳಗಳಿಗೆ ತೆರಳಲು ಸಾರ್ವಜನಿಕ ಸಾರಿಗೆ ಕೊರತೆಯಿಂದಾಗಿ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಇದು ಸಾಮಾನ್ಯ ಪ್ರಯಾಣಿಕರಿಗೆ ಆರ್ಥಿಕ ಹೊರೆ ಮತ್ತು ಅಡಚಣೆಯನ್ನು ಉಂಟುಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಇತ್ತೀಚೆಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರೈಲ್ವೆ ಸಚಿವರನ್ನು ಭೇಟಿಯಾದ ಬೆನ್ನಲ್ಲೇ ಈ ವೇಳಾಪಟ್ಟಿ ಪರಿಷ್ಕರಣೆಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಹಲವಾರು ಅನುಮಾನ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ:
ಈ ನಡುವೆ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದು, ಬದಲಾವಣೆಗಳನ್ನು ಮರುಪರಿಶೀಲಿಸಿ ಹಳೆಯ ವೇಳಾಪಟ್ಟಿಯನ್ನೇ ಮುಂದುವರಿಸುವಂತೆ ಆಗ್ರಹಿಸಿದ್ದಾರೆ.
ರೈಲು ಸಂಖ್ಯೆ ೧೬೫೭೬ ಹಾಗೂ ೧೬೫೩೯/೧೬೫೪೦ ವೇಳಾಪಟ್ಟಿ ಬದಲಾವಣೆಯ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿರುವ ಕ್ಯಾ. ಚೌಟ, ಸಾರ್ವಜನಿಕರ ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ನೈಋತ್ಯ ರೈಲ್ವೆ ಈ ಪರಿಷ್ಕರಣೆಯನ್ನು ಹಿಂಪಡೆದು ಹಳೆಯ ಸಮಯವನ್ನೇ ಕಾಯ್ದುಕೊಳ್ಳಬೇಕೆಂದು ಸಚಿವರಿಗೆ ಮನವಿ ಮಾಡಿದ್ದಾರೆ.