Home ಜಿಲ್ಲೆ ಮೈಸೂರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ: ಶಾಸಕ ಹೆಚ್.ಟಿ.ಮಂಜು

ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ: ಶಾಸಕ ಹೆಚ್.ಟಿ.ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.10:
ತಾಲೂಕಿನ ಕಿಕ್ಕೇರಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಚ್.ಟಿ.ಮಂಜು ಅವರು ಭೂಮಿ ಪೂಜೆ ನೆರವೇರಿಸಿದರು.
ಕಿಕ್ಕೇರಿ ಹೋಬಳಿಯ ವಡಕಹಳ್ಳಿ, ಐನೋರಹಳ್ಳಿ, ದೇವರಹಳ್ಳಿ, ಕಡಹೆಮ್ಮಿಗೆ, ಯಲಾದಹಳ್ಳಿ ಗ್ರಾಮಗಳಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಐಕನಹಳ್ಳಿ ಕೊಪ್ಪಲು ತೋಪೇಗೌಡ ವೃತ್ತದಿಂದ ಕಾಂತರಾಜಪುರ ಮಾರ್ಗದ ರಸ್ತೆ ಹಾಗೂ ಊಗಿನಹಳ್ಳಿ ಗೇಟ್ ನಿಂದ ಮಾದಾಪುರ ಮಾರ್ಗದ ಮುಖ್ಯ ರಸ್ತೆಯ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಬೇಕು. ಅಧಿಕಾರಿಗಳು ಕಾಮಗಾರಿ ನಡೆಯುವ ವೇಳೆ ಉಪಸ್ಥಿತರಿದ್ದು ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ನಾನು ವಿರೋಧ ಪಕ್ಷದ ಶಾಸಕನಾಗಿದ್ದೇನೆ ಸರ್ಕಾರ ಕೊಡುವ ಅಲ್ಪ ಸ್ವಲ್ಪ ಅನುದಾನದಲ್ಲಿ ತೀರಾ ಅಗತ್ಯ ಇರುವ ಗ್ರಾಮಗಳಿಗೆ ಅನುದಾನವನ್ನು ಹಂಚಿಕೆ ಮಾಡಿ ರಸ್ತೆ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದೇನೆ. ಹಂತ ಹಂತವಾಗಿ ತಾಲೂಕಿನ ಎಲ್ಲಾ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ನನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅನುದಾನವನ್ನು ನೀಡುತ್ತೇನೆ. ತಾಲೂಕಿನ ಎಲ್ಲಾ ಗ್ರಾಮಗಳನ್ನು ನಾನು ಸಮಾನವಾಗಿ ಕಾಣುತ್ತೇನೆ ಯಾವುದೇ ಕಾರಣಕ್ಕೂ ಯಾವುದೇ ಗ್ರಾಮವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಸ್ವಲ್ಪ ತಡವಾಗಬಹುದು ಎಲ್ಲಾ ಗ್ರಾಮಗಳಿಗೂ ಸರ್ಕಾರ ನೀಡುವ ಅನುದಾನವನ್ನು ಹಂಚಿಕೆ ಮಾಡಿ ತಾಲ್ಲೂಕಿನ ಜನತೆ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. 2028ಕ್ಕೆ ಜೆಡಿಎಸ್- ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಆಗ ತಾವು ಕ್ಷೇತ್ರದಿಂದ ನನ್ನನ್ನು ಪುನರ್ ಆಯ್ಕೆ ಮಾಡಿದರೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳಷ್ಟು ಅನುದಾನ ತಂದು ತಾಲೂಕು ಎಂದೆಂದೂ ಕಂಡರಿಯದಂತಹ ಗುರುತರವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎಂದು ಶಾಸಕ ಹೆಚ್.ಟಿ. ಮಂಜು ಭರವಸೆ ನೀಡಿದರು.


ತಾಲೂಕಿನಾದ್ಯಂತ ತಮ್ಮ ರಸ್ತೆಗಳನ್ನು ನಿರ್ಮಿಸಿ ತಾಲ್ಲೂಕನ್ನು ಮಾದರಿ ತಾಲ್ಲೂಕನ್ನಾಗಿಸಲು ನಿರ್ಧಾರ ಮಾಡಿದ್ದೇನೆ. ತಾಲೂಕಿನ ಪ್ರತಿ ಗ್ರಾಮಗಳಿಗೂ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಈ ಕಾಮಗಾರಿಯಲ್ಲಿ ಜೆ.ಜೆ.ಎಂ.ಕಾಮಗಾರಿಯ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಿಕೊಡಬೇಕು ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಅಪೂರ್ಣಗೊಳಿಸಬಾರದು. ಒಂದು ವೇಳೆ ಅಪೂರ್ಣಗೊಳಿಸಿದ ಕಾಮಗಾರಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು ಛಾರ್ಜ್ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.


ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬಸವೇಗೌಡ, ಕಿಕ್ಕೇರಿ ಹೋಬಳಿಯ ಜೆಡಿಎಸ್ ಘಟಕದ ಅಧ್ಯಕ್ಷರಾದ ಕಾಯಿಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಕೃಷ್ಣೇಗೌಡ, ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರ್, ವಡಕಹಳ್ಳಿ ಮಂಜೇಗೌಡ, ಲಕ್ಷ್ಮೀಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಊಗಿನಹಳ್ಳಿ ಮುರುಳೀಧರ್, ಬಾಲಚಂದ್ರು ಎಲ್‍ಐಸಿ ಅಶೋಕ್, ಮುಖಂಡರಾದ ಐಕನಹಳ್ಳಿ ದೇವೇಗೌಡ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.