
ದಾವಣಗೆರೆ, ಫೆ.27:- ಕೇಂದ್ರ ಸರ್ಕಾರದ 78 ಇಲಾಖೆಗಳಲ್ಲಿ ಖಾಲಿ ಇರುವ 9.29 ಲಕ್ಷ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಎಐಡಿವೈಓ ನೇತೃತ್ವದಲ್ಲಿ ವಿದ್ಯಾರ್ಥಿ-ಯುವ ಜನರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಎಐಡಿವೈಓ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಎಸಿ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಲಾಯಿತು.
ಇದೇ ವೇಳೆ ಮಾತನಾಡೊದ ಸಂಘಟನೆ ಮುಖಂಡರು, ಕೇಂದ್ರದ 78 ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು. ರಾಜ್ಯದ 43 ಇಲಾಖೆಗಳಲ್ಲಿ ಖಾಲಿ ಇರುವ 2,84,881 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಎಲ್ಲಾ ತೆರನಾದ ಪರೀಕ್ಷಾ ಅಕ್ರಮ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ದೇಶಾದ್ಯಂತ ಬೃಹತ್ ಉದ್ಯೋಗದಾತ ಸಂಸ್ಥೆಗಳಾದ ಬ್ಯಾಂಕ್, ರೈಲ್ವೇ, ಎಲ್ಐಸಿ ಮತ್ತಿತರೆ ಸಂಸ್ಥೆಗಳಲ್ಲಿ ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿ ಹೇರುವ ಮೂಲಕ ಕಾಯಂ ಹುದ್ದೆಗಳ ಭರ್ತಿಯನ್ನೇ ನಿಲ್ಲಿಸಲಾಗಿದೆ. ಮತ್ತೊಂದು ಕಡೆ ಇಂತಹ ಸಂಸ್ಥೆಗಳನ್ನು ಕ್ರಮೇಣವಾಗಿ ಖಾಸಗೀಕರಣಕ್ಕೆ ಒಳಪಡಿಸಲಾಗಿದೆ. ಇದರಿಂದ ಮತ್ತಷ್ಟು ಉದ್ಯೋಗ ಕಡಿತವಾಗಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನೇಮಕಾತಿಗೆ ದುಬಾರಿ ಅರ್ಜಿ ಶುಲ್ಕ ಕೈ ಬಿಡಬೇಕು. ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗಾವಕಾಶ ಸಿಗುವವರೆಗೆ ಗೌರವಯುತ ಜೀವನ ಮಡೆಸಲು ಸೂಕ್ತ ನಿರುದ್ಯೋಗ ಭತ್ಯೆ ನೀಡಬೇಕು. ಗುತ್ತಿಗೆ ಪದ್ಧತಿ ರದ್ಧುಪಡಿಸಬೇಕು. ಎಲ್ಲಾ ಹುದ್ದೆಗಳಿಗೂ ಕಾಯಂ ನೇಮಕಾತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ದೇಶಾದ್ಯಂತ ಗಿಗ್ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಟ ವೇತನ ಜಾರಿಗೊಳಿಸಬೇಕು. ಸಾಮಾ ಜಿಕ ಭದ್ರತೆ ಖಚಿತಪಡಿಸಬೇಕು. ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ನೀತಿ ಕೈಬಿಡಬೇಕು. ಕೆಪಿಎಸ್ಸಿಯಲ್ಲಿನ ಅಕ್ರಮ ತಡೆಗಟ್ಟಲು ರಾಜ್ಯ ಸರ್ಕಾರ ಹೋಟಾ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಬಡ ಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವ ಹಾಗೂ ಶಿಕ್ಷಕ ಹುದ್ದೆಗಳನ್ನು ನಾಶಗೊಳಿಸುವ ಕೆಪಿಎಸ್ ಮ್ಯಾಗ್ನೆಟ್ ಶಾಲೆ ನೀತಿ ಕೈಬಿಟ್ಟು, ರಾಜ್ಯದ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂದು ತಾಕೀತು ಮಾಡಿದರು.
ಪ್ರತಿಭಟನೆಯಲ್ಲಿ ಪರಶುರಾಮ, ಅನಿಲ್ ಕುಮಾರ್ ಇತರರು ಇದ್ದರು.




























