
ಸಂಜೆವಾಣಿ ವಾರ್ತೆ
ಟಿ.ನರಸೀಪುರ: ಮಾ.02:- 250 ವರ್ಷಗಳ ಐತಿಹಾಸಿಕ, ಇತಿಹಾಸ ಪರಂಪರೆ ಇರುವ ಮೈಸೂರು ರೇಷ್ಮೆ ಉದ್ದಿಮೆ ರಕ್ಷಿಸಲು ರಾಜ್ಯ ರೈತ ಕಲ್ಯಾಣ ಸಂಘ ಮುಂದಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಭರವಸೆ ನೀಡಿದರು.
ಪಟ್ಟಣದ ಕೆಎಸ್ ಐಸಿ ಘಟಕ ಮುಂಭಾಗದಲ್ಲಿ ಕಳೆದ 9 ದಿನಗಳಿಂದ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. ಭಾರತೀಯ ರೇಷ್ಮೆಗಳ ಮಹಾರಾಣಿ ಉಳಿಸಲು ಹಾಗೂ ಕೆಎಸ್‍ಐಸಿ ರೈತ ಕಾರ್ಮಿಕರ ಹೋರಾಟಕ್ಕೆ ರೈತ ಕಲ್ಯಾಣ ಎಂದೆಂದಿಗೂ ಬೆನ್ನೆಲುಬಾಗಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಹೊಸ ಜಗತ್ತನ್ನು ಸೃಷ್ಟಿಸುತ್ತಿರುವ ಕೃತಕ ಬುದ್ಧಿಮತ್ತೆ(ಂI) ತಂತ್ರಜ್ಞಾನದಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಬೇಸತ್ತಿರುವ ಈ ಸಂಧಿಗ್ನ ಪರಿಸ್ಥಿತಿಯಲ್ಲಿ ಕೆಎಸ್‍ಐಸಿ ಕಾರ್ಖಾನೆಯನ್ನು ಮುಚ್ಚಿ ನೂರಾರು ಮಂದಿ ಕಾರ್ಮಿಕರನ್ನು ಬೀದಿ ಪಾಲು ಮಾಡಲು ಹೊರಟಿರುವ ಸರ್ಕಾರದ ನಿರ್ಧಾರ ಸೂಕ್ತವಲ್ಲ. ಕೂಡಲೇ ಈ ನಿರ್ಧಾರ ವಾಪಾಸ್ ಪಡೆದು ಕಾರ್ಖಾನೆ ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಎಚ್ಚರಿಸಲು ಬಯಸುತ್ತೇನೆ ಎಂದರು.
ನೂರಾರು ವರ್ಷಗಳಿಂದ ಜಗತ್ಪ್ರಸಿದ್ಧಿಯಾಗಿ ಮೈಸೂರಿನ ಹೆಸರನ್ನು ಪರಂಪರೆಯನ್ನು ಎತ್ತಿ ಹಿಡಿಯುತ್ತಿರುವ ಮೈಸೂರು ಸಿಲ್ಕ್ಸ್ ಉದ್ದಿಮೆಯಾದ ಕೆಎಸ್‍ಐಸಿ ಕಾರ್ಖಾನೆಯನ್ನ ಉಳಿಸಿ ಹಾಗೂ ದೇಶದಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುತ್ತಿರುವ ರಾಜ್ಯ ಹಾಗೂ ಏಷ್ಯಾ ಖಂಡದಲ್ಲೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಹೊಂದಿರುವ ಲಕ್ಷಾಂತರ ರೈತರ ಪಾರಂಪರಿಕ ರೇಷ್ಮೆ ಕೃಷಿ ಬೆಳೆಯನ್ನ ಉಳಿಸುವ ಮುಖಾಂತರ ರೇಷ್ಮೆ ಕೃಷಿ ರೈತರ ಬದುಕನ್ನ ಹಸನು ಗೊಳಿಸಿಸಬೇಕೆಂದು ಈ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲು ಬಯಸುತ್ತೇನೆ ಎಂದು ಹೇಳಿದರು.
ನಾಡು, ನುಡಿ, ಜಲ ಮತ್ತು ಭಾಷೆ ಉಳಿವಿಗೆ ರಾಜ್ಯದ ಹಲವು ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಈ ಕಾರ್ಖಾನೆ ಕೂಡ ರಾಜ್ಯದ ಅಸ್ಮಿತೆಯಾಗಿದ್ದು, ರಾಜಪರಂಪರೆ 1912ರಲ್ಲಿ ಸ್ಥಳೀಯ ಜನರಿಗೆ ಉದ್ಯೋಗ ನೀಡಲು ಸ್ಥಾಪಿಸಿದ್ದರು. ಆದರೆ, ಸರ್ಕಾರ ಇಲ್ಲಿ ಕ್ರೀಡಾoಗಣ ನಿರ್ಮಾಣ ಮಾಡುವ ಮುಖೇನ ಕಾರ್ಮಿಕರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.
ಸಾಮಾಜಿಕ ಕಳಕಳಿ, ಸಾಮಾಜಿಕ ನ್ಯಾಯ, ಸಾಮಾಜಿಕ ಬದ್ಧತೆ ಮತ್ತು ಅಭಿವೃದ್ಧಿ ಹರಿಕಾರರು ಎಂದು ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ತಾವು ಯಾವ ಪುರುಷಾರ್ಥಕ್ಕಾಗಿ ರೇಷ್ಮೆ ಘಟಕದಲ್ಲಿ ಕ್ರೀಡಾoಗಣ ನಿರ್ಮಿಸಲು ಮುಂದಾಗಿದ್ದೀರಿ. ಇದರಿಂದ ಇಲ್ಲಿನ ಕಾರ್ಮಿಕರ ಜೀವನದ ಜತೆ ಚೆಲ್ಲಾಟವಾಡುವುದೇಕೆ ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಕೆಎಸ್ ಐಸಿ ಘಟಕದಲ್ಲಿ ಕ್ರೀಡಾoಗಣ ನಿರ್ಮಾಣ ಮಾಡಲು ಬಿಡುವುದಿಲ್ಲ. ಹಾಗೇನಾದರೂ ಸರ್ಕಾರ ಉದ್ದೇಶಿತ ಜಾಗದಲ್ಲಿ ಕ್ರೀಡಾoಗಣ ನಿರ್ಮಾಣ ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯ ಉಪಾಧ್ಯಕ್ಷ ಹರೀಶ್, ಗೌರವಾಧ್ಯಕ್ಷ ಹೇಮಂತ್, ಕಾರ್ಯಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಮಾದೇಗೌಡ, ಕರ್ನಾಟಕ ಪರಿಸರ ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪೆÇ್ರ.ಕಾಳಚೆನ್ನೇಗೌಡ, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯ ಪತ್ರಿಕಾ ಕಾರ್ಯದರ್ಶಿ ಹರೀಶ್.ಪಿ ಗೌಡ, ಮೈಸೂರು ಜಿಲ್ಲಾಧ್ಯಕ್ಷ ಮಹೇಶ್, ಪುರಸಭೆ ಮಾಜಿ ಸದಸ್ಯ ಅರ್ಜುನ್ ರಮೇಶ್,ಯುವ ಅಧ್ಯಕ್ಷ ಪುನೀತ್, ಜಿಲ್ಲಾ ಸಂಚಾಲಕ ಶಂಕರ್,ತಾಲೂಕು ಅಧ್ಯಕ್ಷರಾದ ರವಿಕುಮಾರ್, ಉಮೇಶ್, ಎ.ಎಂ.ಪ್ರತಾಪ್, ಲೋಕೇಶ್, ಮೈಸೂರು ಗ್ರಾಹಕ ಪರಿಷತ್ ಕಾರ್ಯದರ್ಶಿ ಪ್ರಭಾ ನಂದೀಶ್ ಶೋಭಾ ಶಿವಕುಮಾರ್, ಶೈಲಜೇಶ್, ಗಾಯಿತ್ರಿ, ಸುಶೀಲ, ಭಾಗ್ಯ ಶಂಕರ್, ಗಣೇಶ್, ಹಾಜರಿದ್ದರು.
























