
ಕಲಬುರಗಿ: ವಿಶ್ವ ವಾಸ್ತುಶಿಲ್ಪ ದಿನದಂಗವಾಗಿ ಶರಣಬಸವ ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗವು ಕಲಬುರಗಿ ನಗರದ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನ ಹಾಗೂ ಮಹಾಮನೆಯ ನಕ್ಷೆ ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಹಿರಿಯ ಪ್ರಾಧ್ಯಾಪಕ ಹಾಗೂ ಖ್ಯಾತ ವಾಸ್ತುಶಿಲ್ಪಿ ಪೆÇ್ರ. ಅಜಯ್ ಚಂದ್ರನ್ ಸಿ.ಕೆ. ಸೇರಿದಂತೆ ಹಿರಿಯ ವಾಸ್ತುಶಿಲ್ಪಿಗಳ ಮಾರ್ಗದರ್ಶನದಲ್ಲಿ ವಾಸ್ತುಶಿಲ್ಪ ವಿಭಾಗದ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ದೇವಸ್ಥಾನ ಹಾಗೂ ಅದರ ಸಮಗ್ರ ಸಂಕೀರ್ಣದ ನಕ್ಷೆ ರೂಪಿಸುವ ಕಾರ್ಯ ಕೈಗೊಂಡಿದ್ದಾರೆ. ಈ ಕಾರ್ಯದಲ್ಲಿ ಹಿರಿಯ ವಾಸ್ತುಶಿಲ್ಪಿ ಶ್ರೀ ಕಲ್ಯಾಣಿ ಅವರೂ ಮಾರ್ಗದರ್ಶನ ನೀಡುತ್ತಿದ್ದಾರೆ.
ಶರಣಬಸವೇಶ್ವರ ದೇವಸ್ಥಾನದ ಇತಿಹಾಸದಲ್ಲಿ ಮಾತ್ರವಲ್ಲದೆ, ಇಡೀ ಕಲ್ಯಾಣ ಕರ್ನಾಟಕದ ಇತಿಹಾಸದಲ್ಲಿಯೂ ಮಹತ್ವದ ಸ್ಥಾನ ಹೊಂದಿರುವ ದಾಸೋಹ ಮಹಾಮನೆಯನ್ನೂ ಈ ಮ್ಯಾಪಿಂಗ್ ಕಾರ್ಯದಲ್ಲಿ ಸೇರಿಸಿಕೊಳ್ಳಲಾಗಿದೆ.
18ನೇ ಶತಮಾನದ ಸಂತ ಶರಣಬಸವೇಶ್ವರರು ಈ ಭಾಗದಲ್ಲಿ ಬಡವರು ಹಾಗೂ ಅಗತ್ಯವಿರುವವರಿಗೆ ಉಚಿತವಾಗಿ ಅನ್ನ ನೀಡುವ ‘ದಾಸೋಹ’ವನ್ನು ಜೀವನ ಪದ್ಧತಿಯಾಗಿ ರೂಪಿಸಿದ್ದರು. ತಮ್ಮ ಜೀವನದ ಕೊನೆಯವರೆಗೂ ಕಲಬುರಗಿಯಲ್ಲೇ ನೆಲೆಸಿದ್ದ ಶರಣಬಸವೇಶ್ವರರು ಮಹಾಮನೆಯಲ್ಲಿ ವಾಸವಾಗಿದ್ದರು. ಸುಮಾರು 250 ವರ್ಷಗಳ ಹಿಂದೆ ಸಂತರು ತಮ್ಮ ಅಂತಿಮ ದಿನಗಳಿಗೂ ಮುನ್ನ ಬೆಳಗಿಸಿದ ವಿಶಿಷ್ಟ ‘ನಂದಾದೀಪ’ ಇಂದಿಗೂ ಮಹಾಮನೆಯಲ್ಲಿ ನಿರಂತರವಾಗಿ ಬೆಳಗುತ್ತಿದೆ.
ಇತಿಹಾಸದ ಮತ್ತೊಂದು ಮಹತ್ವದ ಘಟನೆಯಾಗಿ, 1927ರ ಫೆಬ್ರವರಿ 26ರಂದು ಮಹಾತ್ಮ ಗಾಂಧೀಜಿ ಅವರು ಮಹಾಮನೆಗೆ ಭೇಟಿ ನೀಡಿ, ಸಂಸ್ಥಾನದ 7ನೇ ಪೀಠಾಧಿಪತಿಗಳಾದ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರನ್ನು ಭೇಟಿಯಾಗಿದ್ದರು. ಶರಣಬಸವೇಶ್ವರ ದೇವಸ್ಥಾನದ ಮೇಲೆ ರಜಾಕಾರರು ನಡೆಸಿದ ದಾಳಿಯನ್ನು ಖಂಡಿಸಿ, ಅದರ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಗಾಂಧೀಜಿ ಅವರು ಈ ಭೇಟಿ ನೀಡಿದ್ದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರು ದೇವಸ್ಥಾನ ಹಾಗೂ ಮಹಾಮನೆಯ ಮ್ಯಾಪಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಪೆÇ್ರ. ಅಜಯ್ ಚಂದ್ರನ್, ವಾಸ್ತುಶಿಲ್ಪ ವಿಭಾಗದ ಡೀನ್ ಪೆÇ್ರ. ವೈಭವಕುಮಾರ ನವಣಿ, ವಿಭಾಗದ ಮುಖ್ಯಸ್ಥೆ ಪೆÇ್ರ. ಪಲ್ಲವಿ ಪಾಟೀಲ, ಪೆÇ್ರ. ಗೌತಮ್, ಸಂಯೋಜಕ ಪೆÇ್ರ. ಸಿದ್ದಲಿಂಗ ಮಂಠಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಶ್ರೀ ಬಸವರಾಜ ದೇಶಮುಖ ಅವರು ವಾಸ್ತುಶಿಲ್ಪ ವಿಭಾಗದ ವಿವಿಧ ಚಟುವಟಿಕೆಗಳ ಕುರಿತು ವಿವರಗಳನ್ನೊಳಗೊಂಡ ‘ಆರ್ಕಿಟೆಕ್ಚರ್ ಮ್ಯಾಗಜಿನ್ 2025-26’ ಬಿಡುಗಡೆ ಮಾಡಿದರು.























