Home ಮುಖಪುಟ ಸುದ್ದಿ ವರಿಷ್ಠರು ಕರೆದರೆ ದೆಹಲಿಗೆ ಹೋಗುತ್ತೇನೆ: ಸಿಎಂ

ವರಿಷ್ಠರು ಕರೆದರೆ ದೆಹಲಿಗೆ ಹೋಗುತ್ತೇನೆ: ಸಿಎಂ

ಬೆಂಗಳೂರು, ಮೇ ೬-ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ ಎಂಬ ಚರ್ಚೆಗಳಿಗೆ ತೆರೆ ಎಳೆಯುವಂತೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಲಿದೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಮುಖ್ಯಮಂತ್ರಿ ಬದಲಾವಣೆ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ವರಿಷ್ಠರು ಕರೆದರೆ ದೆಹಲಿಗೆ ಹೋಗುತ್ತೇನೆ ಎಂದು ಖಡಕ್ಕಾಗಿ ಹೇಳಿದರು.


ಪಕ್ಷದ ಹೈಕಮಾಂಡ್ ಹೇಳಿದರೆ ಐದು ವರ್ಷ ಅಧಿಕಾರದಲ್ಲಿ ಇರುತ್ತೇನೆ. ಹೈಕಮಾಂಡ್ ಮಾತನ್ನು ಮಾತ್ರ ನಾನು ಕೇಳುವುದು. ಬೇರೆ ಯಾರೇ ಏನೇ ಮಾತನಾಡಿದರೂ ಅದು ಅವರ ವೈಯುಕ್ತಿಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆಯ ವಿಚಾರದ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.


ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ. ಹೈಕಮಾಂಡ್ ನನ್ನನ್ನು ಇರಿ ಎಂದರೆ ಇರುತ್ತೇನೆ. ಎಲ್ಲ ತೀರ್ಮಾನ ಮಾಡುವುದು ಹೈಕಮಾಂಡ್ ಎಂದು ಸ್ಪಷ್ಟಪಡಿಸಿದ ಅವರು, ನೀವು ಎಷ್ಟೇ ಬಾರಿ ನಾಯಕತ್ವ ಬದಲಾವಣೆ ಪ್ರಶ್ನೆ ಕೇಳಿದರೂ ನನ್ನ ಉತ್ತರ ಹೈಕಮಾಂಡ್ ಅಷ್ಟೇ ಎಂದು ಹೇಳಿದರು.


ನಾನು ಹೈಕಮಾಂಡ್ ಮಾತನ್ನು ಮಾತ್ರ ಕೇಳುತ್ತೇನೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಅವರು ಪುನರುಚ್ಛರಿಸಿದರು. ರಾಹುಲ್‌ಗಾಂಧಿ ಅವರು ನನ್ನನ್ನು ಇದುವರೆಗೂ ದೆಹಲಿಗೆ ಬರುವಂತೆ ಹೇಳಿಲ್ಲ. ನಾನು ಕೂಡಾ ರಾಹುಲ್‌ಗಾಂಧಿ ಅವರ ಭೇಟಿಗೆ ಸಮಯ ಕೇಳಿಲ್ಲ. ರಾಹುಲ್‌ಗಾಂಧಿ ಅವರು ನನ್ನನ್ನು ಕರೆದರೆ ನಾನು ದೆಹಲಿಗೆ ಹೋಗುತ್ತೇನೆ. ಅವರು ಕರದೇ ಇಲ್ಲ ಎಂದ ಮೇಲೆ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ವಿಚಾರಗಳ ಸಭೆಯ ಅಜೆಂಡಾ ಹೇಗೆ ನಿಗದಿಯಾಗುತ್ತದೆ ಎಂದು ಪ್ರಶ್ನಿಸಿದರು.


ಸದ್ಯಕ್ಕಂತೂ ದೆಹಲಿ ಪ್ರವಾಸ ಇಲ್ಲ ಎಂದು ಹೇಳುವ ಮೂಲಕ ಸದ್ಯ ರಾಜ್ಯ ರಾಜಕೀಯದಲ್ಲಿ ಯಾವ ಬದಲಾವಣೆ ಇಲ್ಲ ಎನ್ನುವ ಸುಳಿವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದರು.


ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂಚೆ ಮತಗಳನ್ನು ಖುದ್ಧು ಬಿಜೆಪಿ ಅಭ್ಯರ್ಥಿ ಜೀವರಾಜು ಮತ್ತು ಚುನಾವಣಾ ಸಿಬ್ಬಂದಿ ಸೇರಿಕೊಂಡು ತಿದ್ದಿದ್ದಾರೆ ಎಂದು ಆರೋಪಿಸಿದ ಮುಖ್ಯಮಂತ್ರಿಗಳು, ಅವತ್ತು ಫಲಿತಾಂಶ ಪ್ರಕಟವಾದಾಗ ಬಿಜೆಪಿ ಸರ್ಕಾರ ಇತ್ತು ಅವರ ನಿರ್ದೇಶನದಂತೆ ಚುನಾವಣಾ ಸಿಬ್ಬಂದಿಗಳು ಜೀವರಾಜ್ ಜತೆ ಸೇರಿ ಅಂಚೆ ಮತ ತಿದ್ದಿದ್ದಾರೆ ಎಂದು ಪುನರುಚ್ಛರಿಸಿದರು.


ಫಲಿತಾಂಶ ಪ್ರಕಟವಾದ ದಿನ ಮತ ಪತ್ರದಲ್ಲಿ ಇಲ್ಲದ ಗೆರೆ ಈಗ ಹೇಗೆ ಬಂತು ನಾವು ಈ ವಿಚಾರದಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.


ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನ ಮೆಚ್ಚುಗೆಗೆ ಪಾತ್ರವಾಗಿವೆ. ಹಾಗಾಗಿಯೇ ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವುಸಾಧಿಸಲು ಸಾಧ್ಯವಾಗಿದೆ ಎಂದರು. ವಿಪಕ್ಷಗಳು ಯಾವುದೇ ತಂತ್ರಗಾರಿಕೆ ನಡೆಸಿದರೂ ಗೆಲುವು ಸಾಧ್ಯವಾಗಿಲ್ಲ. ಬಿಜೆಪಿಯವರು ಕುತಂತ್ರಗಳನ್ನಷ್ಟೇ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು