Home ಮುಖಪುಟ ಸುದ್ದಿ ಅಮೆರಿಕ ಮಹಿಳೆ ಮೇಲೆ ಅತ್ಯಾಚಾರ ಇಬ್ಬರ ಬಂಧನ

ಅಮೆರಿಕ ಮಹಿಳೆ ಮೇಲೆ ಅತ್ಯಾಚಾರ ಇಬ್ಬರ ಬಂಧನ

ಕೊಡಗು,ಏ.೨೨- ಕೇರಳ ಗಡಿಭಾಗದ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಹೋಂಸ್ಟೇನಲ್ಲಿ ತಂಗಿದ್ದ ಅಮೆರಿಕ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ವಾಷಿಂಗ್ಟನ್ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್, ಹೋಂಸ್ಟೇ ಮಾಲೀಕ ವಿಶಾಲ್ ಬಂಧಿತ ಆರೋಪಿಗಳಾಗಿದ್ದು, ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ.


ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂ ಸ್ಟೇನಲ್ಲಿ ತಂಗಿದ್ದರು.ಏಪ್ರಿಲ್ ೧೯ರಂದು ಅಲ್ಲಿದ್ದ ಜಾರ್ಖಂಡ್ ಮೂಲದ ವ್ಯಕ್ತಿ ವೃಜೇಶ್ ಕುಮಾರ್ ಸಿಹಿ ಪಾನಕಕ್ಕೆ ಮತ್ತು ಬರುವ ಔಷಧಿ ಬೆರಸಿ ಮಹಿಳೆಗೆ ನೀಡಿದ್ದಾನೆ. ಆಕೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ಎಗಿದ್ದಾನೆ ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ.


ವಿಷಯ ತಿಳಿದ ಹೋಮ್‌ಸ್ಟೇ ಮಾಲೀಕ ವಿಶಾಲ್ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿರೋದು ದೂರಿನಿಂದ ಗೊತ್ತಾಗಿದೆ. ಮೂರು ದಿನಗಳ ಕಾಲ ಸಂತ್ರಸ್ತೆ ಯಾರನ್ನೂ ಸಂಪರ್ಕ ಮಾಡದಂತೆ ತಡೆದಿದ್ದಾನೆ. ಹೋಂ ಸ್ಟೇ ವೈಫೈ ಕೂಡ ಕಟ್ ಮಾಡಿದ್ದಾನೆ. ೩ ದಿನದ ಬಳಿಕ ಸಂತ್ರಸ್ತೆ ಮೈಸೂರಿಗೆ ಹೋಗುವುದಾಗಿ ಹೇಳಿ ಹೊರಟಿದ್ದಾರೆ.


ನಂತರ ಮೈಸೂರಿಗೆ ಬಂದ ವಿದೇಶಿ ಮಹಿಳೆ ಅಮೆರಿಕದ ರಾಯಭಾರ ಕಚೇರಿಯನ್ನ ಸಂಪರ್ಕಿಸಿ, ಮಾಹಿತಿ ನೀಡಿದ್ದಾರೆ. ಬಳಿಕ ಇ-ಮೇಲ್ ಮೂಲಕ ಮೈಸೂರಿನ ಅಧಿಕಾರಿಗಳನ್ನ ಸಂಪರ್ಕಿಸಿದ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳು ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ಮೈಸೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಘಟನೆ ಬೆಳಕಿಗೆ ಬಂದ ನಂತರ ನವದೆಹಲಿ ಹಾಗೂ ಚೆನ್ನೈ ಕಚೇರಿಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮಂಗಳವಾರ ಕೊಡಗಿಗೆ ಭೇಟಿ ನೀಡಿದ್ದಾರೆ. ಆದ್ರೆ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ನೀಡಲು ಕೊಡಗು ಎಸ್ಪಿ ಹಿಂದೇಟು ಹಾಕಿದ್ದಾರೆ. ಪ್ರಕರಣ ಸಂಬಂಧ ಅತ್ಯಾಚಾರ ಆರೋಪಿ ಹಾಗೂ ಹೋಂ ಸ್ಟೇ ಮಾಲಿಕ ಇಬ್ಬರನ್ನೂ ಬಂಧಿಸಿದ್ದಾರೆ. ಕೋರ್ಟ್ ಮೇ ೩ರ ವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಆದೇಶ ನೀಡಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ, ಈಗಲೇ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.