
ಬೆಂಗಳೂರು, ಏ. ೨೨- ಕಬಡ್ಡಿ ಪಂದ್ಯಾವಳಿ ವೇಳೆ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಮಾತನಾಡಿರುವುದಕ್ಕೆ ತಮ್ಮ ಮೇಲೆ ಎಫ್‌ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಬಡ್ಡಿ ಆಟ ನಡೆಯುವಾಗ ಹಳ್ಳಿಯಲ್ಲಿ ಎಲ್ಲರೂ ಮಾತನಾಡುತ್ತಾರೆ. ಅದೇ ರೀತಿ ನಾನು ಮಾತನಾಡಿದ್ದೇನೆ.
ಯಾವ ರೀತಿ ಮಾತನಾಡಿದ್ದೇನೆ ಎಂಬುದು ಮುಖ್ಯವಾಗುತ್ತದೆ. ಬೆಟ್ಟಿಂಗ್ ಪ್ರಮೋಟ್ ಮಾಡಿದ್ದರೆ ಅದು ತಪ್ಪು. ಜವಾಬ್ದಾರಿ ಸ್ಥಾನದಲ್ಲಿರುವ ನಾನು ಆ ರೀತಿ ಪ್ರಮೋಟ್ ಮಾಡುತ್ತೇನೆ ಎಂದರೆ ಅದು ಸುಳ್ಳು ಎಂದರು.
ನನ್ನ ಮಾತುಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಎಲ್ಲವೂ ಇರುತ್ತದೆ. ನಾನು ಗೃಹ ಇಲಾಖೆಯ ಮುಖ್ಯಸ್ಥ. ನಾನು ಕಾನೂನಿಗೆ ಗೌರವ ಕೊಡಬೇಕಲ್ಲವೇ, ಕಾನೂನು ಯಾವ ಕ್ರಮ ಕೈಗೊಳ್ಳುತ್ತೋ ಕೈಗೊಳ್ಳಲಿ. ಎಲ್ಲವನ್ನು ಕಾನೂನಿಗೆ ಬಿಟ್ಟಿದ್ದೇನೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ನೋಟಿಸ್ ಕೊಟ್ಟಿರಲಿಲ್ಲ. ನೋಟಿಸ್ ಕೊಟ್ಟಿದ್ದರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡುತ್ತಿದ್ದೆ. ಏಕಾಏಕಿ ಆದೇಶ ಮಾಡಿದ್ದಾರೆ. ಕಾನೂನನ್ನು ನಾನು ಗೌರವಿಸುತ್ತೇನೆ. ಕಾನೂನಿನಂತೆ ಎಲ್ಲವೂ ಇತ್ಯರ್ಥವಾಗಲಿ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಾದರೂ ನಿಮ್ಮನ್ನು ಟಾರ್ಗೆಟ್ ಮಾಡಿದ್ದಾರಾ ಎಂಬ ಪ್ರಶ್ನೆಗೆ ಇಲ್ಲ, ಇದನ್ನು ಇನ್ಮೇಲೆ ಗಮನಸಿತ್ತೇನೆ ಎಂದರು.
ಕೊಡಗಿನಲ್ಲಿ ವಿದೇಶಿ ಮಹಿಳೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ರೀತಿಯ ಘಟನೆಗಳಾದರೆ ಅದು ನಮ್ಮ ದೇಶದ ಬಗ್ಗೆ ತಪ್ಪು ಸಂದೇಶ ಹೋಗುತ್ತದೆ. ಆರೋಪಿಗಳನ್ನು ಬಂಧಿಸಿದ್ದೇವೆ. ಘಟನೆ ನಂತರ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಆಗಿರಬಹುದು. ಎಲ್ಲಾ ಮಾಹಿತಿ ಪಡೆದು ವಿವರವಾಗಿ ಪ್ರತಿಕ್ರಿಯಿಸುತ್ತೇನೆ ಎಂದರು.
ವಿದೇಶಿಯರ ಜತೆ ಈ ರೀತಿ ನಡೆದುಕೊಳ್ಳುವುದು ತಪ್ಪು. ಹೋಂಸ್ಟೇಗಳಿಗೆ ನಾವು ಎಸ್‌ಓಪಿಗಳನ್ನು ಕೊಟ್ಟಿದ್ದೇವೆ. ಆದರೂ ಘಟನೆ ನಡೆದಿದೆ. ಕಾನೂನು ಪ್ರಕಾರ ಕ್ರಮ ಆಗುತ್ತದೆ ಎಂದು ಅವರು ಹೇಳಿದರು.
ಸಂಪುಟ ಪುನಾರಚನೆಯ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು. ಈ ಬಗ್ಗೆ ನಾವುಗಳು ಮಾತನಾಡುವುದು ಅಪ್ರಸ್ತುತ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವೆಲ್ಲಾ ಬದ್ಧ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಾರೋ ಮಾಟ ಮಾಡಿಸಿದ್ದಾರೆ ಎಂಬ ಮಾಜಿ ಸಚಿವ ಕೆ.ಎನ್. ರಾಜಣ್ಣನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಣ್ಣನವರಿಗೆ ಮಾಹಿತಿ ಇರಬಹುದು, ಅವರಿಗೆ ಯಾರಾದರೂ ಹೇಳಿರಬಹುದು. ಅದಕ್ಕೆ ಅವರು ಹಾಗೆ ಹೇಳಿರಬೇಕು. ಸುಮ್ಮನೆ ಅವರು ಹೇಳಿರುವುದಿಲ್ಲ ಎಂದು ಗೃಹ ಸಚಿವರು ರಾಜಣ್ಣ ಹೇಳಿಕೆಯನ್ನು ಸಮರ್ಥಿಸುವ ದಾಟಿಯಲ್ಲಿ ಉತ್ತರಿಸಿದರು.

























