Home ಕ್ರೈಂ ಸುದ್ದಿಗಳು ಖೋಟಾ ನೋಟು ಚಲಾವಣೆ ಇಬ್ಬರ ಸೆರೆ

ಖೋಟಾ ನೋಟು ಚಲಾವಣೆ ಇಬ್ಬರ ಸೆರೆ

ಬೆಂಗಳೂರು,ಜು.೨೧-ಖೋಟಾ ನೋಟುಗಳನ್ನು ತಯಾರಿಸಿ, ಚಲಾವಣೆ ಮಾಡುತ್ತಿದ್ದಂತಹ ಹೊರ ರಾಜ್ಯದ ಓರ್ವ ಸೇರಿ ಇಬ್ಬರನ್ನು ಕುಂಬಳಗೋಡು ಪೊಲೀಸರು ಬಂಧಿಸಿ ೩.೨೯ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.


ಚೆನ್ನೈನ ಬಾಲಾಜಿನಗರದ ವೆಂಕಟಸುಬ್ರಮಣಿ(೪೧)ಹಾಗೂ ಪಿರಿಯಾಪಟ್ಟಣ ತಾಲೂಕಿನ ಹುಣಸಕುಪ್ಪೆಯ ಅರವಿಂದ(೪೭)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಬಂಧಿತರಿಂದ ೩.೨೯ ಲಕ್ಷ ಮೌಲ್ಯದ ೫೦೦ ಮುಖಬೆಲೆಯ ೩೩೮ ನೋಟುಗಳು, ೧ ಜೆರಾಕ್ಸ್ ಮೆಷನ್, ೧ ಲ್ಯಾಪ್ಟಾಪ್, ೧ ಕಾರು, ೩ ಮೊಬೈಲ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.


ಕಳೆದ ಜು.೩ ರಂದು ಕುಂಬಳಗೋಡುವಿನ ಬಿಡಿಎ ಅಪಾರ್ಟಮೆಂಟ್ ವೊಂದರಲ್ಲಿ ಬಾಡಿಗೆದಾರನಾದ ವ್ಯಕ್ತಿಯು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ದಾಖಲಿಸಿದ
ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೊಂಡು ಓರ್ವನನ್ನು ಕೆಂಚನಪುರ ಕ್ರಾಸ್ ಬಳಿ ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಖೋಟಾ ನೋಟುಗಳನ್ನು ಮುದ್ರಣ ಮಾಡಿ ಹಾಗೂ ಚೆನ್ನೈನಲ್ಲಿರುವ ಓರ್ವ ಸಹಚರನಿಗೆ ಮಾರಾಟ ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ.


ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಖೋಟಾ ನೋಟುಗಳನ್ನು ಮುದ್ರಣ ಮಾಡಿ ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದು, ಆತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಜು.೭ ರಂದು ತಮಿಳುನಾಡು ಚೆನ್ನೈನ ಮಾರುತಿನಗರದಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿದೆ.


ಆರೋಪಿಗಳ ಬೆಂಗಳೂರು ಹಾಗೂ ಚೆನ್ನೈನ ಆರೋಪಿಗಳ ವಾಸದ ಮನೆಯಿಂದ ೫೦೦ ಮುಖಬೆಲೆಯ ೩೩೮ ನೋಟುಗಳು. ೦೩ ಮೊಬೈಲ್ ಪೋನ್, ೦೧ ಜೆರಾಕ್ಸ್ ಮೆಷಿನ್, ೦೧ ಲ್ಯಾಪ್ಟಾಪ್, ೦೧ ಕಾರು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.


ನೈರುತ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಅನಿತ.ಬಿ.ಹದ್ದಣ್ಣವರ್ ಮಾರ್ಗದರ್ಶನದಲ್ಲಿ ಕುಂಬಳಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಕುಮಾರ್ ಮತ್ತವರ ಸಿಬ್ಬಂದಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.