Home ಜಿಲ್ಲೆ ಪೊಲೀಸ್ ಹುತಾತ್ಮರ ತ್ಯಾಗ, ಕರ್ತವ್ಯನಿಷ್ಠೆ ಸಮಾಜಕ್ಕೆ ಸದಾ ಪ್ರೇರಣೆ

ಪೊಲೀಸ್ ಹುತಾತ್ಮರ ತ್ಯಾಗ, ಕರ್ತವ್ಯನಿಷ್ಠೆ ಸಮಾಜಕ್ಕೆ ಸದಾ ಪ್ರೇರಣೆ

ಗದಗ,ಅ೨೩: ಪೊಲೀಸ್ ಹುತಾತ್ಮರ ತ್ಯಾಗ, ದೇಶಪ್ರೇಮ ಮತ್ತು ಕರ್ತವ್ಯನಿಷ್ಠೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ಹುತಾತ್ಮರ ಸ್ಮರಣೆ ಎಂದರೆ ಅವರ ಹೆಸರುಗಳನ್ನು ನೆನಪಿಸಿಕೊಳ್ಳುವುದಷ್ಟೇ ಅಲ್ಲ, ಅವರು ಪಾಲಿಸಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದು ಗದಗ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಗಂಗಾಧರ ಸಿ.ಎಂ. ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗದಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

೧೯೫೯ರ ಅಕ್ಟೋಬರ್ ೨೧ರಂದು ಲಡಾಖ್‌ನ ಹಾಟ್ ಸ್ಪಿçಂಗ್ಸ್ ಪ್ರದೇಶದಲ್ಲಿ ಚೀನಾದ ಸಶಸ್ತç ಪಡೆಗಳ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ೧೦ ಯೋಧರು ಪ್ರಾಣಾರ್ಪಣೆ ಮಾಡಿದರು. ಅವರ ತ್ಯಾಗದ ಸ್ಮರಣಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ ೨೧ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ದೇಶದ ರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಪ್ರಾಣತ್ಯಾಗ ಮಾಡಿದ ಎಲ್ಲ ಪೊಲೀಸ್ ಸಿಬ್ಬಂದಿಯ ಸೇವೆಯನ್ನು ಸ್ಮರಿಸುವುದು ಈ ದಿನದ ಉದ್ದೇಶವಾಗಿದೆ ಎಂದರು.

ಹುತಾತ್ಮರ ಕುಟುಂಬಗಳ ತ್ಯಾಗವೂ ಸ್ಮರಣೀಯ:

ಕರ್ತವ್ಯ ನಿರ್ವಹಿಸುವಾಗ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಹಿಂದೆ ನೋವು ಮತ್ತು ತ್ಯಾಗದಿಂದ ಕೂಡಿದ ಕುಟುಂಬವಿರುತ್ತದೆ. ಮಗನನ್ನು ಕಳೆದುಕೊಂಡ ತಾಯಿ, ಪತಿಯನ್ನು ಕಳೆದುಕೊಂಡ ಪತ್ನಿ ಹಾಗೂ ತಂದೆಯ ಪ್ರೀತಿಯಿಂದ ವಂಚಿತರಾದ ಮಕ್ಕಳು ಅನುಭವಿಸುವ ನೋವು ಅಪಾರ. ದೇಶಕ್ಕಾಗಿ ತಮ್ಮ ಕುಟುಂಬದ ಸಂತೋಷವನ್ನೇ ತ್ಯಾಗ ಮಾಡಿದ ಈ ಕುಟುಂಬಗಳ ಸಹನಶಕ್ತಿಯನ್ನು ಸಮಾಜ ಗೌರವಿಸಬೇಕು. ಹುತಾತ್ಮರ ಕುಟುಂಬಗಳು ಒಂಟಿಯಲ್ಲ; ಅವರ ಜವಾಬ್ದಾರಿ ಇಡೀ ದೇಶದ್ದಾಗಿದೆ ಎಂದು ಹೇಳಿದರು.

ಪೊಲೀಸ್ ಸಿಬ್ಬಂದಿಗೂ ಕುಟುಂಬದೊAದಿಗೆ ಹಬ್ಬಗಳನ್ನು ಆಚರಿಸುವ, ಮಕ್ಕಳೊಂದಿಗೆ ಸಮಯ ಕಳೆಯುವ ಆಸೆಗಳಿರುತ್ತವೆ. ಆದರೆ, ಸಮಾಜದ ಸುರಕ್ಷತೆಯನ್ನು ತಮ್ಮ ಹೊಣೆಗಾರಿಕೆಯೆಂದು ಭಾವಿಸಿ ಅನೇಕರು ವೈಯಕ್ತಿಕ ಸಂತೋಷವನ್ನು ತ್ಯಾಗ ಮಾಡುತ್ತಾರೆ. ಜನರು ನೆಮ್ಮದಿಯಿಂದ ನಿದ್ರಿಸುವಾಗ ಪೊಲೀಸರು ರಾತ್ರಿ ಗಸ್ತು ತಿರುಗುತ್ತಿರುತ್ತಾರೆ. ಹೀಗಾಗಿ ಪೊಲೀಸ್ ಸಮವಸ್ತçವು ಕೇವಲ ಬಟ್ಟೆಯಲ್ಲ; ಅದು ಶಿಸ್ತು, ಧೈರ್ಯ, ಜವಾಬ್ದಾರಿ ಮತ್ತು ಜನರ ವಿಶ್ವಾಸದ ಸಂಕೇತವಾಗಿದೆ ಎಂದರು.

ಪೊಲೀಸ್-ಸಾರ್ವಜನಿಕರ ಸಹಕಾರ ಮುಖ್ಯ:

ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಪ್ರಮುಖ ಜವಾಬ್ದಾರಿಯಾದರೂ, ಅದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಪ್ರತಿಯೊಬ್ಬ ನಾಗರಿಕರೂ ಕಾನೂನು ಪಾಲಿಸಬೇಕು, ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕು ಹಾಗೂ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ದುರ್ಬಲ ವರ್ಗಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸ ಹಾಗೂ ಸಹಕಾರ ಬೆಳೆದಾಗ ಅಪರಾಧ ನಿಯಂತ್ರಣ ಮತ್ತು ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸೈಬರ್ ಅಪರಾಧಗಳು, ಆನ್‌ಲೈನ್ ವಂಚನೆಗಳು, ಮಾದಕ ವಸ್ತುಗಳ ಅಕ್ರಮ ಸಾಗಾಟ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು ಹಾಗೂ ಸಂಘಟಿತ ಅಪರಾಧಗಳು ಇಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಹೊಸ ಸವಾಲುಗಳಾಗಿವೆ. ಇವುಗಳನ್ನು ಎದುರಿಸಲು ಆಧುನಿಕ ತಂತ್ರಜ್ಞಾನದ ಬಳಕೆ, ನಿರಂತರ ತರಬೇತಿ ಮತ್ತು ತನಿಖಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಪೊಲೀಸರ ಸುರಕ್ಷತೆ ಮತ್ತು ಆರೋಗ್ಯಕ್ಕೂ ಆದ್ಯತೆ ನೀಡಬೇಕು:

ಪೊಲೀಸ್ ಸಿಬ್ಬಂದಿಯ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾಗಿದೆ. ಕರ್ತವ್ಯದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅಗತ್ಯ ವಿಶ್ರಾಂತಿ, ಸೂಕ್ತ ತರಬೇತಿ, ಸಂಪನ್ಮೂಲಗಳು ಹಾಗೂ ಕುಟುಂಬದೊAದಿಗೆ ಸಮಯ ಕಳೆಯುವ ಅವಕಾಶ ಕಲ್ಪಿಸಬೇಕು. ಕರ್ತವ್ಯಕ್ಕೆ ತೆರಳುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯೂ ಸುರಕ್ಷಿತವಾಗಿ ಮನೆಗೆ ಮರಳಬೇಕು ಎಂಬುದು ಅವರ ಕುಟುಂಬದಷ್ಟೇ ಸಮಾಜದ ಆಶಯವೂ ಆಗಿರಬೇಕು ಎಂದು ಹೇಳಿದರು.

ಪೊಲೀಸ್ ಹುತಾತ್ಮರ ಸ್ಮರಣೆಯು ಅವರ ತ್ಯಾಗವನ್ನು ಗೌರವಿಸುವುದರ ಜೊತೆಗೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಸುರಕ್ಷತೆ ಮತ್ತು ಕಲ್ಯಾಣದ ಬಗ್ಗೆಯೂ ಕಾಳಜಿ ವಹಿಸಬೇಕೆಂಬ ಸಂದೇಶ ನೀಡುತ್ತದೆ ಎಂದರು.

ಯುವಜನರಲ್ಲಿ ದೇಶಪ್ರೇಮ ಮತ್ತು ಸೇವಾ ಮನೋಭಾವ ಬೆಳೆಸಬೇಕು:

ಯುವಜನರಲ್ಲಿ ಶಿಸ್ತು, ಧೈರ್ಯ, ಕರ್ತವ್ಯನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಅಗತ್ಯವಾಗಿದೆ. ಪೊಲೀಸ್ ಹುತಾತ್ಮರ ಜೀವನವು ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುವುದು, ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಹಾಗೂ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುವುದನ್ನು ಕಲಿಸುತ್ತದೆ. ದೇಶಪ್ರೇಮವೆಂದರೆ ಕೇವಲ ಘೋಷಣೆಗಳನ್ನು ಕೂಗುವುದಲ್ಲ; ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೂ ದೇಶಸೇವೆಯಾಗಿದೆ ಎಂದು ಹೇಳಿದರು.

ಹುತಾತ್ಮರ ದಿನವು ಕೇವಲ ಶೋಕಾಚರಣೆಯಾಗದೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು. ವೀರನ ದೇಹ ಮಣ್ಣಿನಲ್ಲಿ ಮಣ್ಣಾಗಬಹುದು, ಆದರೆ ಆತನ ತ್ಯಾಗದ ಕಥೆ ಎಂದಿಗೂ ಮರೆಯಾಗುವುದಿಲ್ಲ. ಹುತಾತ್ಮನ ಉಸಿರು ನಿಂತರೂ ಆತನ ದೇಶಪ್ರೇಮ ಲಕ್ಷಾಂತರ ಹೃದಯಗಳಲ್ಲಿ ಜೀವಂತವಾಗಿರುತ್ತದೆ ಎಂದು ಭಾವುಕರಾಗಿ ನುಡಿದರು.

ಕಾರ್ಯಕ್ರಮದಲ್ಲಿ ದೇಶದ ರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಪ್ರಾಣತ್ಯಾಗ ಮಾಡಿದ ಎಲ್ಲ ಪೊಲೀಸ್ ಹುತಾತ್ಮರಿಗೆ ಮತ್ತು ಅವರ ಕುಟುಂಬಗಳಿಗೆ ಪುಷ್ಪ, ಗೌರವಪೂರ್ವಕ ನಮನ ಸಲ್ಲಿಸಲಾಯಿತು.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್. ಎನ್. ಅವರು ಉಪಸ್ಥಿತಿಯಲ್ಲಿ ಅರ್ಥ ಪೂರ್ಣವಾಗಿ ಹುತಾತ್ಮರ ದಿನಾಚರಣೆ ಜರುಗಿತು. ಹುತಾತ್ಮ ಪೋಲಿಸರ ಹೆಸರುಗಳನ್ನು ಹೇಳಿ ಅವರಿಗೆ ೨ ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಇದೇ ವೇಳೆ ಹುತಾತ್ಮರಿಗೆ ಅತಿಥಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಡಿ ವೈ ಎಸ್ ಪಿ ಗಳಾದ ಮಹಾಂತೇಶ್ ಸಜ್ಜನ, ಮುರ್ತುಜಾ ಖಾದ್ರಿ, ಪ್ರಭುಗೌಡ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು. ಪರೆಡ್ ಕಮಾಂಡರ್ ಡಿಎಆರ್ ಆರ್ ಪಿ ಐ ಶಂಕರಗೌಡ ಪಾಟೀಲ ಅವರು ಕವಾಯತು ನಡೆಸಿಕೊಟ್ಟರು. ಪ್ರೊ. ದತ್ತಪ್ರಸನ್ ಪಾಟೀಲ ನಿರ್ವಹಿಸಿದರು.