
ಕಲಬುರಗಿ:ಏ.13: ಹನ್ನೆರಡನೇ ಶತಮಾನದ ಸಮಾಜ ಸುಧಾರಕ, ವಚನಕಾರ ಮತ್ತು ಮಾನವತಾವಾದಿ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸರ್ಕಾರವು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದೆ. ಸಮಾನತೆ, ಕಾಯಕ ತತ್ವ, ಸ್ತ್ರೀ ಸಮಾನತೆ ಮತ್ತು ಜಾತಿ ರಹಿತ ಸಮಾಜಕ್ಕಾಗಿ ಶ್ರಮಿಸಿದ ಬಸವಣ್ಣನವರ ತತ್ವಗಳು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಅಡಿಪಾಯವಾಗಿವೆ. ಈ ಘೋಷಣೆಯು ಅವರ ಸಾಮಾಜಿಕ ನ್ಯಾಯದ ಹರಿಕಾರರ ಪಾತ್ರವನ್ನು ಗೌರವಿಸುತ್ತದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಹೇಳಿದರು. ಕೋರವಾರದ ‘ಶ್ರೀ ಅಣವೀರಭದ್ರೇಶ್ವರ ಪ್ರೌಢಶಾಲೆ’ಯಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯುತ್ಸವದ ಅಂಗವಾಗಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಿದ್ದ “ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ನಾಗೇಂದ್ರಪ್ಪ ಮೋಘಾ ಮಾತನಾಡಿ, ಬಸವೇಶ್ವರರ ತತ್ವ, ಕೊಡುಗೆಯನ್ನು ವಿದ್ಯಾರ್ಥಿ ದಿಸೆಯಿಂದಲೇ ಅಧ್ಯಯನ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ವಿಶ್ವಗುರು ಬಸವಣ್ಣನವರು ಜಗತ್ತಿನ ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿದವರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದಡಿಯಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ, ಎಲ್ಲಾ ನ್ಯಾಯಗಳನ್ನು ಒದಗಿಸಿದ್ದಾರೆ. ಬಸವಾದಿ ಶರಣರ ತತ್ವ, ವಚನಗಳನ್ನು ಎಲ್ಲೆಡೆ ಪಸರಿಸಲು ನಮ್ಮ ಬಳಗ ಬಸವ ಜಯಂತಿ ಅಂಗವಾಗಿ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಳಗದ ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್. ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕ ಬಾಬುರಾವ ಪೂಜಾರಿ, ಶಿಕ್ಷಕರಾದ ಮಲ್ಲಿಕಾರ್ಜುನ ಹೆಳವರ, ಸಿದ್ದಾರ್ಥ, ನೀಲಕಂಠ ಪಾಟೀಲ, ಶಂಕರ, ಗೋವಿಂದ, ಶೇಖರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.






















