
ಕಲಬುರಗಿ,ಏ.30- ಜಿಲ್ಲೆಯಲ್ಲಿ ದಿನೇದಿನೇ ತಾಪಮಾನ ಏರಿಕೆಯಾಗುತ್ತಿದ್ದು, ಹಲವೆಡೆ 45 ಡಿಗ್ರಿ ಸೆಲ್ಸಿಯಸ್‍ಗಿಂತ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತೀವ್ರ ಬಿಸಿಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸೂಚನೆಗಳನ್ನು ಪ್ರಕಟಿಸಿದೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಬಿ. ಪೌಜಿಯಾ ತರುನ್ನುಮ್ ಅವರು ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ.
ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ತೀವ್ರ ಬಿಸಿಲು ಇರುವುದರಿಂದ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ನಿಯಮಿತವಾಗಿ ನೀರು ಕುಡಿಯುವುದು ಅವಶ್ಯಕ. ಹೊರಹೋಗುವ ಸಂದರ್ಭಗಳಲ್ಲಿ ಹಗುರವಾದ ಹತ್ತಿ ಬಟ್ಟೆ ಧರಿಸಿ, ಛತ್ರಿ ಅಥವಾ ಟೋಪಿ ಬಳಸಬೇಕು.
ದೇಹದ ಉಷ್ಣಾಂಶ ಸಮತೋಲನದಲ್ಲಿಡಲು ಎಳನೀರು, ಮಜ್ಜಿಗೆ ಹಾಗೂ ಓಆರ್‍ಎಸ್ ದ್ರಾವಣ ಸೇವನೆ ಒಳಿತು ಎಂದು ಸಲಹೆ ನೀಡಲಾಗಿದೆ.
ರೈತರು ಮಧ್ಯಾಹ್ನದ ವೇಳೆಯಲ್ಲಿ ಹೊಲದ ಕೆಲಸ ತಪ್ಪಿಸಿ, ಮುಂಜಾನೆ ಅಥವಾ ಸಂಜೆ ವೇಳೆಯಲ್ಲಿ ಕಾರ್ಯನಿರ್ವಹಿಸಬೇಕು. ಕಾರ್ಮಿಕ ಇಲಾಖೆಯು ಮಧ್ಯಾಹ್ನ 12ರಿಂದ 3ರವರೆಗೆ ಹೊರಾಂಗಣ ಕೆಲಸಗಳನ್ನು ನಿಲ್ಲಿಸಲು ಸೂಚಿಸಿದ್ದು, ಕಾರ್ಮಿಕರಿಗೆ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಕಡ್ಡಾಯವಾಗಿದೆ. ಪ್ರತಿ ಗಂಟೆಗೆ ವಿಶ್ರಾಂತಿ ನೀಡುವಂತೆ ತಿಳಿಸಲಾಗಿದೆ.
ಜಾನುವಾರುಗಳಿಗೆ ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ಕೆಲಸ ನೀಡಬಾರದು ಎಂದು ಪಶುಸಂಗೋಪನಾ ಇಲಾಖೆ ತಿಳಿಸಿದೆ. ನೆರಳು ಮತ್ತು ಮೇವು ಒದಗಿಸುವಂತೆ ಸೂಚಿಸಲಾಗಿದೆ.
ಆಸ್ಪತ್ರೆಗಳು ಹಾಗೂ ಕುಡಿಯುವ ನೀರಿನ ಕೇಂದ್ರಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಬಿಸಿಗಾಳಿ ಸಂಬಂಧಿತ ಕಾಯಿಲೆಗಳಿಗೆ ವಿಶೇಷ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ.
ತಲೆಸುತ್ತು, ವಾಂತಿ ಅಥವಾ ಅಸ್ವಸ್ಥತೆ ಕಾಣಿಸಿಕೊಂಡಲ್ಲಿ ತಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಬೇಕು.
ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.






















