Home ಜಿಲ್ಲೆ ದಾವಣಗೆರೆ ದ್ವಿತೀಯ ಪಿಯು ಪರೀಕ್ಷೆ: ೨೯೧ ವಿದ್ಯಾರ್ಥಿಗಳು ಗೈರು

ದ್ವಿತೀಯ ಪಿಯು ಪರೀಕ್ಷೆ: ೨೯೧ ವಿದ್ಯಾರ್ಥಿಗಳು ಗೈರು

ಚಿತ್ರದುರ್ಗ,ಮಾ. ೧- ಫೆ.೨೮ ರಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-೧ ಕನ್ನಡ ವಿಷಯದ ಪರೀಕ್ಷೆಗೆ ೨೯೧ ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಕನ್ನಡ ವಿಷಯದಲ್ಲಿ ೧೧,೯೯೪ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ೧೧,೭೦೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ೨೯೧ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಜಿಲ್ಲೆಯ ೨೬ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು ಎಂದು ಡಿಡಿಪಿಯು ಕೆ.ತಿಮ್ಮಪ್ಪ ತಿಳಿಸಿದ್ದಾರೆ.

“ದ್ವಿತೀಯ ಪಿಯುಸಿ ಪರೀಕ್ಷೆಯು ವಿದ್ಯಾರ್ಥಿಗಳ ಜೀವನದ ಅತ್ಯಂತ ನಿರ್ಣಾಯಕ ಘಟ್ಟವಾಗಿದ್ದು, ಈ ಬಾರಿ ಚಿತ್ರದುರ್ಗ ಜಿಲ್ಲೆಯು ರಾಜ್ಯಮಟ್ಟದ ಫಲಿತಾಂಶದಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಅಲಂಕರಿಸುವಂತಾಗಬೇಕು” ಎಂದು ಸಂಸದ ಗೋವಿಂದ ಎಂ. ಕಾರಜೋಳ ಆಶಯ ವ್ಯಕ್ತಪಡಿಸಿದರು.

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ, ದ್ವಿತೀಯ ಪಿಯು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಇಂದು ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತಲೂ ಹೆಚ್ಚಿನ ಶ್ರಮವಹಿಸಿ ಅದ್ಭುತ ಪೈಪೋಟಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅವರು ಶ್ಲಾಘಿಸಿದರು.

ಕಳೆದ ೨೦೨೩ರಲ್ಲಿ ಜಿಲ್ಲೆಯು ಪಿಯು ಫಲಿತಾಂಶದಲ್ಲಿ ಶೇ. ೫೯ರಷ್ಟು ಫಲಿತಾಂಶದೊಂದಿಗೆ ೨೮ನೇ ಸ್ಥಾನದಲ್ಲಿತ್ತು ಮತ್ತು ೨೦೨೪ರಲ್ಲಿ ಫಲಿತಾಂಶ ಶೇ. ೭೨ಕ್ಕೆ ಏರಿಕೆಯಾದರೂ ಸ್ಥಾನ ೩೧ಕ್ಕೆ ಕುಸಿದಿತ್ತು. ಈ ಬಾರಿ ಜಿಲ್ಲೆಯ ಶೈಕ್ಷಣಿಕ ಗೌರವವನ್ನು ಹೆಚ್ಚಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಷ್ಟೇ ಸೀಮಿತವಾಗದೆ ಮುಂದೆ ನೀಟ್ ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಎದುರಿಸಬೇಕು ಹಾಗೂ ಮಿಲಿಟರಿ, ಪೈಲಟ್, ವೈದ್ಯಕೀಯ ಮತ್ತು ಕಾನೂನು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಷ್ಟ್ರದ ಕೀರ್ತಿ ಹೆಚ್ಚಿಸಬೇಕು ಶುಭ ಹಾರೈಸಿದರು.