ಕಲಬುರಗಿ :ಡಿ.1: ಭಯಾನಕ ಏಡ್ಸ್ ಕಾಯಿಲೆ 2030ರ ವೇಳೆಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರ, ಆರೋಗ್ಯ ಇಲಾಖೆ ಹತ್ತು-ಹಲವು ನಿರ್ಮೂಲನಾ ಯೋಜನೆಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದೆ. ಇದಕ್ಕೆ ಸಾರ್ವಜನಕರು ಸಹಕಾರ ನೀಡಬೇಕು. ಎಲ್ಲರು ಜೊತೆಗೂಡಿ ಏಡ್ಸ್ ರೋಗವನ್ನು ನಿರ್ಮೂಲನೆ ಮಾಡೋಣ ಎಂದು ವೈದ್ಯಾಧಿಕಾರಿ ಡಾ. ಅನುಪಮಾ ಎಸ್.ಕೇಶ್ವಾರ ಹೇಳಿದರು. ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ವಿಶ್ವ ಏಡ್ಸ್ ದಿನಾಚರಣೆ” ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಏಡ್ಸ್ ನಿರ್ಮೂಲನಾ ಕ್ರಮಗಳಲ್ಲಿ ವೈದ್ಯಕೀಯ ಚಿಕಿತ್ಸೆ, ತಡೆಗಟ್ಟುವಿಕೆ ಮತ್ತು ಸಮಾಜದ ಸಹಭಾಗಿತ್ವವನ್ನು ಒಳಗೊಂಡಿವೆ. ಚಿಕಿತ್ಸೆಯಲ್ಲಿ ಆಂಟಿರೆಟ್ರೋವೈರಲ್ ಥೆರಪಿ ಬಳಕೆಯಾಗಿದ್ದು, ಇದು ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ತಡೆಗಟ್ಟುವ ಕ್ರಮಗಳಲ್ಲಿ ಲೈಂಗಿಕ ಸಂರಕ್ಷಣೆ, ತಾಯಿಯಿಂದ ಮಗುವಿಗೆ ಹರಡುವುದನ್ನು ತಡೆಯುವುದು ಮತ್ತು ಪೂರ್ವ-ಹೊರಗಾಗುವಿಕೆ ತಡೆಗಟ್ಟುವಿಕೆ ಸೇರಿವೆ. ಇವುಗಳ ಜೊತೆಗೆ, ಸಂಶೋಧನೆ, ನಿಧಿ ಹೂಡಿಕೆ ಮತ್ತು ಜಾಗತಿಕ ಸಹಕಾರವು ನಿರ್ಮೂಲನೆಗೆ ಅತ್ಯಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನುರ್, ಗಂಗಾಜ್ಯೋತಿ ಗಂಜಿ, ರೇಷ್ಮಾ ನಕ್ಕುಂದಿ, ಚಂದಮ್ಮ ಮರಾಠಾ, ಲಕ್ಷ್ಮೀ ಮೈಲಾರಿ,ಮಂಗಲಾ ಚಂದಾಪುರೆ,ನಾಗೇಶ್ವರಿ ಮುಗಳಿವಾಡಿ ಹಾಗೂ ಬಡಾವಣೆಯ ನಾಗರಿಕರು, ಮಹಿಳೆಯರು ಭಾಗವಹಿಸಿದ್ದರು.























