Home ಜಿಲ್ಲೆ ಕಲಬುರಗಿ ಪರಮ ಸತ್ಯದ ಪ್ರಭುಲಿಂಗಲೀಲೆ

ಪರಮ ಸತ್ಯದ ಪ್ರಭುಲಿಂಗಲೀಲೆ

ಕಲಬುರಗಿ: ಪ್ರಭುವಾದದ್ದು, ಬಸವಣ್ಣನಾದದ್ದು, ಅಕ್ಕನಾದದ್ದು, ಉಳಿದೆಲ್ಲ ಶರಣರಾದದ್ದು ಸಾಮಾನ್ಯವಾದ ಮಾತಲ್ಲ. ವಚನಗಳನ್ನುಹೇಳುವುದು ಸುಲಭ. ಆದರೆ ಆ ತಾತ್ವಿಕ ಮಾತುಗಳು ಪಚನವಾಗುವುದು ತುಂಬಾ ಕಷ್ಟದ ಕೆಲಸ. ಅವರ ಭಕ್ತಿ, ಆಚಾರ, ವಿಚಾರ,ನಿಲುವು, ಅವರ ಕಾಯಕ, ದಾಸೋಹ ಇವೆಲ್ಲ ಶಬ್ದಗಳ ಜೊತೆ ಆಡಿದ ಆಟವಲ್ಲ. ನಾವೆಲ್ಲ ಶಬ್ದಗಳ ಜೊತೆ ಆಟವಾಡುತ್ತಿದ್ದೇವೆ.ಆದರೆ ಆವರ ನಿಲುವಿನ ಸತ್ಯತೆಯ ಜೊತೆಯಲ್ಲಿ ನಮ್ಮ ಭಾವ, ಬದುಕು ಆತ್ಮೋನ್ನತಿಯ ಆನಂದದಿಂದ ಆವರಿಸಿಕೊಳ್ಳುತ್ತದೆ.
ಚಾಮರಸ ಕವಿ, ಅನುಭಾವಿ ಆಗಿ ಶರಣರ ಬದುಕಿನ ವಚನಾನುಭವದ ಸತ್ಯಗಳನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಿಬಲ್ಲವರು, ಭಾವುಕರು, ಶಿವಭಕ್ತಿಯ ಬಲ್ಲ ಮೂರು ವರ್ಗದ ಜನರನ್ನು ಮುಖ್ಯವಾಗಿಟ್ಟುಕೊಂಡು ಪ್ರಭುಲಿಂಗಲೀಲೆಯನ್ನುಸಾರಸ್ವತ ಲೋಕಕ್ಕೆ ಅರ್ಪಣೆ ಮಾಡಿದ್ದಾರೆ. ಒಂದರ್ಥದಲ್ಲಿ ಎಲ್ಲರೂ ಮಹಾದೇವನ ಸ್ವರೂಪರೆ ಎಂದು ಅವರು ಹೇಳಿದ್ದಾರೆ.
ಶರಣಾರ್ಥಿಯೊಂದಿಗೆ ಆರಂಭವಾಗುವ ಈ ಕಥನಕ ಎರಡನೆ ಗತಿಯಲ್ಲಿ ಅಪರೂಪದ ಪ್ರಸಂಗ ಎಣೆಯುವ ಮೂಲಕ ಪ್ರಭುವಿನಲೀಲೆಯನ್ನು ವಿಸ್ತಾರಗೊಳಿಸುತ್ತಾನೆ. ಈ ಗತಿಯಲ್ಲಿ 42 ನುಡಿಗಳಿವೆ. ಕೈಲಾಸದ ವರ್ಣನೆಯಿಂದ ಆರಂಭವಾಗುತ್ತದೆ. ಪಾರ್ವತಿ-ಪರಮಾತ್ಮರ ಸಂವಾದದ ಪೌರಾಣಿಕ ಹಿನ್ನೆಲೆಯಲ್ಲಿ ಕಾವ್ಯ ಆರಂಭ ಮಾಡಿದರೂ ಉಪಯುಕ್ತ ವಿಚಾರಗಳಿವೆ. ಅದೇವೇಳೆಗೆ ಸತ್ಯಶರಣರ ಮೂಲತತ್ವಗಳಿಗೆ ಚ್ಯುತಿಯಾಗದಂತೆ ಶರಣರ ಅದ್ಭುತ ಶಕ್ತಿಯನ್ನು ಕೆಳಗಿನ ಸೂಚನಾ ಪದ್ಯದಲ್ಲಿ ವರ್ಣಿಸಿದ್ದಾನೆ.
ಪರಮನಿತ್ಯಾನಂದ ಸುಖವಹ ಪರಿ ಕೇಳಿದಡೀಶ ಹೇಳಲು ಗಿರಿಜೆ ಮಾಯೆಯನಿಳೆಗೆ ಕಳುಹಿದಳು ಅಲ್ಲಮನ
ನಿತ್ಯ ಸುಖ ಅನುಭವಿಸಬೇಕೆಂದರೆ ಅದರ ಮಾರ್ಗ ಯಾವುದು ಎಂದು ಪಾರ್ವತಿ ಕೇಳಿದಾಗ ಅದನ್ನು ಪರಮಾತ್ಮ ಹೇಳುತ್ತಾನೆ. ಆಗಪಾರ್ವತಿ ತಾಮಸ ಕಳೆಯ ಮಾಯೆ ಇಳೆಗೆ ಕಳುಹಿಸಿದಳು. ಪದ್ಯದ ಸಾರ ಪಲ್ಲವಿಯಲ್ಲಿ ಎನ್ನುವಂತೆ ಈ ಪದ್ಯದ ಸಾರಕೊನೆಯಲ್ಲಿದೆ.
ಬಾಳಿನಲ್ಲಿ ಬರಬಹುದಾದ ಸೋಲನ್ನು ನಿವಾರಿಸಿ ಅಂತಃಕರಣ ಸ್ವಚ್ಛಗೊಳಿಸಿಕೊಂಡು ಜನನ ಮರಣ ಗೆದ್ದು ಚಿಂತೆಯಿಲ್ಲದೆಸುಜ್ಞಾನ ತುಂಬಿಕೊಂಡು ಗೌರವದಿಂದ ಆಲಿಸುವುದು. ಇದರಲ್ಲಿ ಇಡೀ ಜೀವನದ ಸತ್ಯವೇ ಅಡಗಿದೆ ಎಂದಿದ್ದಾರೆ.
ಮುಂದೆ ಬರುವ ಮರಣ ಭಾದೆ ಗೆದ್ದು, ಸುಜ್ಞಾನವೆಂಬ ಅಮೃತ ತುಂಬಿಕೊಂಡು ಸುಖದಿಂದ ಶಾಶ್ವತ ಪದವಿಯನ್ನು ಈ ಪ್ರಭುಲಿಂಗಲೀಲೆ ಒದಗಿಸುತ್ತದೆ. ಇದನ್ನು ಶ್ರದ್ಧೆಯಿಂದ ಕೇಳಿದಾಗ. ಮಾತ್ರ ಗುಹೇಶ್ವರನ ಬೆಳಕು ಕಾಣಲು ಸಾಧ್ಯ. ಹೀಗೆ ಕೈಲಾಸದ (ರಜತಾದ್ರಿ) ವರ್ಣನೆ ಮಾಡುತ್ತ ಶರಣರ ತತ್ವಕ್ಕೆ ಸಮೀಪದ ನುಡಿಗಳನ್ನು ಹೇಳುತ್ತಾರೆ.

  • ಪೂಜ್ಯ ಮಹಾಂತ ಸ್ವಾಮೀಜಿ,ಮುದಗಲ್