Home ಜಿಲ್ಲೆ ಕಲಬುರಗಿ ಅಂತರರಾಜ್ಯ ಕುಖ್ಯಾತ ಮನೆಗಳ್ಳನ ಬಂಧನ 14 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ

ಅಂತರರಾಜ್ಯ ಕುಖ್ಯಾತ ಮನೆಗಳ್ಳನ ಬಂಧನ 14 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ

ಕಲಬುರಗಿ,ಏ.30= ಇಲ್ಲಿನ ದೇವಾನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಜ್ಯ ಕಳ್ಳನೊಬ್ಬನನ್ನು ಬಂಧಿಸಿ 14 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ರಾಜ್ಯದ ಮೆಡಿಚಲ್ ಮಲ್ಕಾಜಗಿರಿಯ ಕೀಸರ ಮಂಡಲ ನಾಗವರಂನ ಶಿವಪ್ರಸಾದ ಆದಿನಾರಾಯಣ ಮಂತ್ರಿ ಅಲಿಯಾಸ್ ಮಂತ್ರಿ ಶಂಕರ (61) ಎಂಬಾತನನ್ನು ಬಂಧಿಸಿ 14 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ನಗರದ ದೇವಾನಗರ ನಿವಾಸಿಯಾಗಿರುವ ನಿವೃತ್ತ ಬಿಎಸ್‍ಎನ್‍ಎಲ್ ಅಧಿಕಾರಿ ಲಕ್ಷ್ಮೀಕಾಂತ ಜಹಾಗೀರಾದಾರ ಅವರ ಮನೆ ಬೀಗ ಮುರಿದು ಕಳ್ಳರು 4.47 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋದ ಬಗ್ಗೆ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ತನಿಖೆ ನಡೆಸಲು ಡಿಸಿಪಿ ಪ್ರವೀಣ್ ಹೆಚ್.ನಾಯಕ್, ಕಲಬುರಗಿ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಐ ಗುರುಲಿಂಗಪ್ಪಗೌಡ ಪಾಟೀಲ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಭಾಕರ, ಸಿರಾಜ್ ಪಟೇಲ್, ಶಿವಲಿಂಗ, ಯಲ್ಲಪ್ಪ, ಸಂಗಣ್ಣ, ಮೋಸಿನ್, ನೀಲಕಂಠ ಪಾಟೀಲ, ಮಲ್ಲಣ್ಣ, ಚನ್ನವೀರೇಶ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಅಂತರರಾಜ್ಯ ಕುಖ್ಯಾತ ಮನೆಗಳನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಅವರು ಶ್ಲಾಘಿಸಿದರು.