Home ಜಿಲ್ಲೆ ಕಲಬುರಗಿ ಉಪವಿಭಾಗದಲ್ಲಿಲ್ಲ ಆರ್‍ಟಿಒ ಕಚೇರಿ: ರಸ್ತೆ ಬದಿಯೇ ನೂತನ ವಾಹನಗಳ ತಪಾಸಣಾ ತಾಣ!ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೈರಾಣು;...

ಉಪವಿಭಾಗದಲ್ಲಿಲ್ಲ ಆರ್‍ಟಿಒ ಕಚೇರಿ: ರಸ್ತೆ ಬದಿಯೇ ನೂತನ ವಾಹನಗಳ ತಪಾಸಣಾ ತಾಣ!ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೈರಾಣು; ಶಾಶ್ವತ ಕಚೇರಿಗಾಗಿ ಸಾರ್ವಜನಿಕರ ಆಗ್ರಹ

ಸುರೇಶ ಬಿಜನಳ್ಳಿ
ಸೇಡಂ, ಜು,21: ತಾಲೂಕಿನಲ್ಲಿ ವಿವಿಧ ಉಪವಿಭಾಗ ಕೇಂದ್ರಗಳದ್ದರು ಸ್ಥಳೀಯ ಉಪವಿಭಾಗದಲ್ಲಿ ಸುಸಜ್ಜಿತ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿ ಓ) ಇಲ್ಲದ ಕಾರಣ, ನೂತನ ವಾಹನಗಳ ನೋಂದಣಿ ತಪಾಸಣೆ ಹಾಗೂ ಚಾಲನಾ ಪರವಾನಗಿ ಪರೀಕ್ಷೆಯನ್ನು ರಸ್ತೆ ಬದಿಯಲ್ಲೇ ನಡೆಸಲಾಗುತ್ತಿದ್ದು, ಸಾರ್ವಜನಿಕರು ಮತ್ತು ಅಧಿಕಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.ಉಪವಿಭಾಗ ಕೇಂದ್ರವಾಗಿ ವರ್ಷಗಳು ಕಳೆದರೂ ಇಲ್ಲಿಗೆ ಸ್ವಂತ ಆರ್‍ಟಿಒ ಕಚೇರಿ ಅಥವಾ ಕನಿಷ್ಠ ಪಕ್ಷ ಸುಸಜ್ಜಿತ ತಪಾಸಣಾ ಮೈದಾನ ಭಾಗ್ಯ ಸಿಕ್ಕಿಲ್ಲ. ಪರಿಣಾಮವಾಗಿ, ನೆರೆಯ ತಾಲ್ಲೂಕಿನಿಂದ ವಾರಕ್ಕೆ ಒಂದೆರಡು ದಿನ ಬರುವ ಮೋಟಾರು ವಾಹನ ನಿರೀಕ್ಷಕರು ಅನಿವಾರ್ಯವಾಗಿ ಮುಖ್ಯ (ರಾಜ್ಯ ಹೆದ್ದಾರಿಯ) ಪಟ್ಟಣದ ಹೊರವಲಯ ಸರ್ಕಿಟ್ ಹೌಸ್ ಮುಂದುಗಡೆ ರಸ್ತೆಯ ಬದಿಯಲ್ಲೇ ನಿಂತು ಹೊಸ ವಾಹನಗಳ ದಾಖಲೆ ಹಾಗೂ ಎಂಜಿನ್ ಸಂಖ್ಯೆಗಳನ್ನು ಪರಿಶೀಲಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.ರಸ್ತೆ ಬದಿಯಲ್ಲಿ ಯಾವುದೇ ನೆರಳಿನ ವ್ಯವಸ್ಥೆ ಅಥವಾ ಆಸನಗಳಿಲ್ಲದ ಕಾರಣ, ಹೊಸ ವಾಹನ ತಂದ ಮಾಲೀಕರು ಗಂಟೆಗಟ್ಟಲೆ ಬಿಸಿಲು ಧೂಳಿನಲ್ಲೇ ಚಳಿಗಾಲ,ಮಳೆಗಾಲ ಧೂಳು ತಿನ್ನುತ್ತಾ ಕಾಯಬೇಕಾಗಿದೆ. ಇನ್ನು ಚಾಲನಾ ಪರೀಕ್ಷೆಗೆ ಬರುವ ಸಾರ್ವಜನಿಕರು, ಅದರಲ್ಲೂ ಮಹಿಳೆಯರು ಮತ್ತು ಹಿರಿಯ ನಾಗರಿಕರು ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯವೂ ಇಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಇರುವಾಗಲೇ ನಾವು ಜೀವ ಕೈಯಲ್ಲಿ ಹಿಡಿದು ಹೊಸ ವಾಹನಗಳ ತಪಾಸಣೆ ಮಾಡಬೇಕಿದೆ. ಕಚೇರಿ ಕೆಲಸ ನಿರ್ವಹಿಸಲು ಸೂಕ್ತ ಕಂಪ್ಯೂಟರ್ ನೆಟ್‍ವರ್ಕ್ ಅಥವಾ ದಾಖಲೆಗಳನ್ನಿಡಲು ಜಾಗವಿಲ್ಲದೆ ತೊಂದರೆಯಾಗುತ್ತಿದೆ ಎಂದು ಹೆಸರೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಶಾಶ್ವತ ಕಚೇರಿ ಸ್ಥಾಪನೆಗಾಗಿ ಉಪವಿಭಾಗಕ್ಕೆ ತಕ್ಷಣವೇ ಸ್ವಂತ ಆರ್‍ಟಿಒ ಕಚೇರಿ ಮಂಜೂರು ಮಾಡಬೇಕು.ಸುಸಜ್ಜಿತ ಮೈದಾನಕಾಗಿ ಚಾಲನಾ ಪರೀಕ್ಷೆ ಮತ್ತು ವಾಹನ ತಪಾಸಣೆಗೆ ನಗರದ ಹೊರವಲಯದಲ್ಲಿ ಪ್ರತ್ಯೇಕ ಮೈದಾನದ ವ್ಯವಸ್ಥೆ ಕಲ್ಪಿಸಬೇಕು.ಮೂಲಸೌಕರ್ಯಗಳಾದ ಸಾರ್ವಜನಿಕರು ಕಾಯಲು ನೆರಳಿನ ಆಸರೆ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡಬೇಕು.ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಉಪವಿಭಾಗಕ್ಕೆ ಕಾಯಂ ಆರ್‍ಟಿಒ ಕಚೇರಿ ಮತ್ತು ಮೂಲಸೌಕರ್ಯ ಕಲ್ಪಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪತ್ರಿಕೆಯು ಕೂಡ ಆದಷ್ಟು ಮಟ್ಟಿಗೆ ಸೇಡಂ ತಾಲೂಕಿನಲ್ಲಿ ನೂ ಇರ್‍ಟಿಓ ಕಚೇರಿ ನಿರ್ಮಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂಬುದೇ ಆಶಯವಾಗಿದೆ.