Home ಜಿಲ್ಲೆ ವಂದೇ ಭಾರತ ಸ್ಲೀಪರ್ ರೈಲು ನಿಲುಗಡೆಗೆ ಸಚಿವ ಸೋಮಣ್ಣನವರ ಇಚ್ಛಾಶಕ್ತಿಯೇ ಕಾರಣ: ಶಾಸಕ ಶರಣಗೌಡ ಕಂದಕೂರ

ವಂದೇ ಭಾರತ ಸ್ಲೀಪರ್ ರೈಲು ನಿಲುಗಡೆಗೆ ಸಚಿವ ಸೋಮಣ್ಣನವರ ಇಚ್ಛಾಶಕ್ತಿಯೇ ಕಾರಣ: ಶಾಸಕ ಶರಣಗೌಡ ಕಂದಕೂರ

ಯಾದಗಿರಿ: ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರ ವಿಶೇಷ ಆಸಕ್ತಿ ಹಾಗೂ ಇಚ್ಛಾಶಕ್ತಿಯಿಂದಾಗಿ ವಂದೇ ಭಾರತ ಸ್ಲೀಪರ್ ರೈಲಿಗೆ ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲುಗಡೆ ದೊರೆತಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ನಗರದ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ವಂದೇ ಭಾರತ ಸ್ಲೀಪರ್ ರೈಲು ನಿಲುಗಡೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ, ರೈಲಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ವಂದೇ ಭಾರತ ಸ್ಲೀಪರ್ ರೈಲು ಆರಂಭವಾಗುವ ಮಾಹಿತಿ ತಿಳಿದ ತಕ್ಷಣ ಯಾದಗಿರಿಯಲ್ಲಿ ನಿಲುಗಡೆ ಕಲ್ಪಿಸುವಂತೆ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಮಾಡಲು ಪ್ರಯತ್ನಿಸಿದ್ದೆ. ಆದರೆ ಅವರು ಕಾಶ್ಮೀರದಲ್ಲಿದ್ದ ಕಾರಣ ದೂರವಾಣಿ ಮೂಲಕವೇ ಜಿಲ್ಲೆಯ ಅಗತ್ಯತೆ ಹಾಗೂ ಜನರ ಅನುಕೂಲದ ಕುರಿತು ವಿವರಿಸಿದ್ದೆ. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು ಕೇವಲ ಎರಡು ನಿಮಿಷಗಳಲ್ಲಿ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ, ರೈಲು ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸಚಿವರ ತ್ವರಿತ ಸ್ಪಂದನೆಯಿAದಲೇ ಯಾದಗಿರಿಗೆ ಈ ಸೌಲಭ್ಯ ದೊರೆತಿದೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ, ವಿ. ಸೋಮಣ್ಣ ಅವರು ಸಚಿವರಾಗಿ ಹಾಗೂ ತಾವು ಶಾಸಕರಾಗಿರುವ ಅವಧಿಯಲ್ಲಿ ಯಾದಗಿರಿ ಜಿಲ್ಲೆಯ ರೈಲ್ವೆ ಮತ್ತು ಜಲಶಕ್ತಿ ಇಲಾಖೆಗೆ ಸಂಬAಧಿಸಿದ ಅಭಿವೃದ್ಧಿ ಕಾರ್ಯಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಗುರುಮಠಕಲ್ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ಕೇಂದ್ರ ಜಲಶಕ್ತಿ ಇಲಾಖೆಯಿಂದ ಅನುದಾನ ಒದಗಿಸುವಂತೆ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮುಂದುವರಿಸುವುದಾಗಿ ಹೇಳಿದರು.
ಅಲ್ಲದೆ, ಯಾದಗಿರಿಯಿಂದ ಬೆಂಗಳೂರಿಗೆ ಪ್ಯಾಸೆಂಜರ್ ರೈಲು ಆರಂಭಿಸುವುದು ಹಾಗೂ ಕೋವಿಡ್‌ಗೂ ಮುನ್ನ ಸಂಚರಿಸುತ್ತಿದ್ದ ಬಳಿಕ ಸ್ಥಗಿತಗೊಂಡಿರುವ ಇಂಟರ್‌ಸಿಟಿ ರೈಲನ್ನು ಪುನರಾರಂಭಿಸುವAತೆ ಮನವಿ ಸಲ್ಲಿಸಲಾಗಿದೆ. ದೀಪಾವಳಿ ನಂತರ ಮತ್ತೊಮ್ಮೆ ಸಚಿವರನ್ನು ಭೇಟಿಯಾಗಿ ಈ ಬೇಡಿಕೆಗಳ ಕುರಿತು ಚರ್ಚಿಸುವುದಾಗಿ ತಿಳಿಸಿದರು.
ಯಾವ ಜನ್ಮದ ಋಣವೋ ಗೊತ್ತಿಲ್ಲ, ತುಮಕೂರು ಸಂಸದರಾಗಿದ್ದರೂ ಸಚಿವ ವಿ. ಸೋಮಣ್ಣ ಅವರು ಯಾದಗಿರಿ ಜಿಲ್ಲೆಯ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಜಿಲ್ಲೆಯ ಜನರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ವಿ. ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು, ಯಾದಗಿರಿಯಲ್ಲಿ ವಂದೇ ಭಾರತ ಸ್ಲೀಪರ್ ರೈಲಿಗೆ ನಿಲುಗಡೆ ಕಲ್ಪಿಸಿರುವ ಕೇಂದ್ರ ಸರ್ಕಾರ ಹಾಗೂ ಸಚಿವ ವಿ. ಸೋಮಣ್ಣ ಅವರ ಕ್ರಮವನ್ನು ಸ್ವಾಗತಿಸಿದರು. ಸರ್ಕಾರಗಳು ಯಾವುದೇ ಇರಲಿ, ಯಾದಗಿರಿ ರೈಲು ನಿಲ್ದಾಣದಲ್ಲಿ ಎಲ್ಲ ರೈಲುಗಳಿಗೂ ನಿಲುಗಡೆ ದೊರೆಯುವಂತಾಗಬೇಕು. ಪ್ರತಿ ರೈಲು ನಿಲುಗಡೆಗೂ ಮನವಿ ಸಲ್ಲಿಸಿ ಒತ್ತಾಯಿಸುವ ಪರಿಸ್ಥಿತಿ ಬರಬಾರದು ಎಂದರು. ಈ ನಿಲುಗಡೆಗೆ ಶಾಸಕ ಶರಣಗೌಡ ಕಂದಕೂರ ಅವರ ನಿರಂತರ ಪ್ರಯತ್ನವೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಡಿಆರ್‌ಎಂ ಸಂಜೀವರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಎಂ ಸೌರವ್ ಪ್ರಕಾಶ್, ಯಾದಗಿರಿ ರೈಲು ನಿಲ್ದಾಣದ ವ್ಯವಸ್ಥಾಪಕ ಭಾಗೀರಥ ಮೀನಾ ವೇದಿಕೆಯಲ್ಲಿದ್ದರು.
ಮಾಜಿ ಸಂಸದ ಡಾ. ಉಮೇಶ ಜಾಧವ್, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ಬಿಜೆಪಿ ಮುಖಂಡರಾದ ರಾಚಣ್ಣಗೌಡ, ದೇವಿಂದ್ರನಾಥ ನಾದ, ಸುಭಾಷಚಂದ್ರ ಕಟಕಟಿ, ನಾಗರತ್ನ ಅನಪುರ, ಶ್ರೀಧರ ಸಾಹುಕಾರ, ಮಲ್ಲಣ್ಣಗೌಡ ಕೌಳೂರ, ಟಿ.ಎನ್. ಭೀಮುನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಮರಯ್ಯ ಸ್ವಾಮಿ ಜಾಲಿಬೆಂಜ್ ಹಾಗೂ ರೈಲ್ವೆ ಟಿಸಿ ನಿರ್ಮಲಾ ನಿರೂಪಿಸಿದರು. ನೂತನ ರೈಲನ್ನು ಸ್ವಾಗತಿಸಲು ಸಾವಿರಾರು ಜನರು ಆಗಮಿಸಿದ್ದರು.
ಯಾದಗಿರಿ ಜಿಲ್ಲೆಯಲ್ಲಿ ಹಿಂದೆ ರೈಲ್ವೆ ಸೌಲಭ್ಯಗಳ ಕೊರತೆ ಎಷ್ಟಿತ್ತು ಎಂಬುದಕ್ಕೆ ರಾಜಧಾನಿ ರೈಲಿನ ನಿಲುಗಡೆಯೇ ಸಾಕ್ಷಿ. ಜಿಲ್ಲೆಯಲ್ಲಿ ಸುಮಾರು ೪೮ ವರ್ಷಗಳ ಕಾಲ ರಾಜಕೀಯ ಮಾಡಿ ಅಧಿಕಾರ ಅನುಭವಿಸಿದ ಕೆಲವರು ಕೂಡ ರಾಜಧಾನಿ ರೈಲಿನಲ್ಲಿ ಪ್ರಯಾಣಿಸಲು ಪಕ್ಕದ ಸೇಡಂ ಪಟ್ಟಣಕ್ಕೆ ತೆರಳಬೇಕಾದ ಪರಿಸ್ಥಿತಿ ಇತ್ತು. ಆದರೆ ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲು ಯಾವುದೇ ಪ್ರಯತ್ನ ನಡೆದಿರಲಿಲ್ಲ ಎಂದು ಶಾಸಕ ಶರಣಗೌಡ ಕಂದಕೂರ ಪರೋಕ್ಷವಾಗಿ ಟೀಕಿಸಿದರು.
ತಮ್ಮ ತಂದೆ, ದಿವಂಗತ ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯಸ್ಮರಣೆ ಸಂದರ್ಭದಲ್ಲಿ ರಾಜಧಾನಿ ರೈಲಿಗೆ ಯಾದಗಿರಿಯಲ್ಲಿ ನಿಲುಗಡೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿತ್ತು ಎಂಬ ಹಿಂದಿನ ಘಟನೆಯನ್ನು ಸ್ಮರಿಸಿದರು.
ಸೈದಾಪುರ ರೈಲು ನಿಲ್ದಾಣವನ್ನು ಅಮೃತ ಭಾರತ ನಿಲ್ದಾಣ ಯೋಜನೆಯಡಿ ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಶರಣಗೌಡ ಕಂದಕೂರ ಭರವಸೆ ನೀಡಿದರು.