
ಬೆಂಗಳೂರು:ಮೇ ೨- ಮೂರು ಭೂಸ್ವಾಧೀನ ಪ್ರಕರಣಗಳ ಸುದೀರ್ಘ ಕಾನೂನು ಸಮರದಲ್ಲಿ ಎಪಿಎಂಸಿ ಪರ ತೀರ್ಪು ಬಂದಿದ್ದು, ಎಪಿಎಂಸಿ ಆದಾಯದ ಮೂಲದಿಂದಲೇ ೪೧೦ ಕೋಟಿ ರೂ. ಪರಿಹಾರ ಧನ ಪಾವತಿ ಮಾಡಿ ೪೫೦ ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಕಚೇರಿಯಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದ ಪರಿಣಾಮ ಬಹುತೇಕ ಎಪಿಎಂಸಿಗಳು ದುಸ್ಥಿತಿ ತಲುಪಿದ್ದವು. ಎಪಿಎಂಸಿ ಆಸ್ತಿಗಳು ಕೈತಪ್ಪಿ ಹೋಗುವ ಪರಿಸ್ಥಿತಿ ಇತ್ತು ಎಂದರು.
ಇಲಾಖೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಎರಡು ವಿಷಯಗಳಿಗೆ ಆದ್ಯತೆ ನೀಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಎಪಿಎಂಸಿಗಳಿಗೆ ಪುನಶ್ಚೇತನ ನೀಡಿ ಆಸ್ತಿಗಳ ರಕ್ಷಣೆ ಮಾಡಲು ಹಾಗೂ ರೈತಸ್ನೇಹಿ ಮಾರುಕಟ್ಟೆ ನಿರ್ಮಿಸಲು ಒತ್ತು ನೀಡಲಾಯಿತು.
ಇದರ ಪರಿಣಾಮವಾಗಿ ಮೂರೂ ಭೂಸ್ವಾಧೀನ ಪ್ರಕರಣಗಳಲ್ಲಿ ಎಪಿಎಂಸಿ ಪರ ತೀರ್ಪು ಬಂದಿದ್ದು, ಮೆಗಾ ಮಾರುಕಟ್ಟೆ ನಿರ್ಮಾಣ ಸೇರಿದಂತೆ ಉದ್ದೇಶಿತ ಯೋಜನೆಗಳನ್ನು ಕೈಗೊಳ್ಳಲು ಇದ್ದ ಅಡ್ಡಿ ನಿವಾರಣೆಯಾಗಿದೆ ಎಂದು ವಿವರಿಸಿದರು.
ಮೆಗಾ ಮಾರ್ಕೆಟ್ ನಿರ್ಮಾಣ ಉದ್ದೇಶಕ್ಕೆ ೧೯೯೪ರಲ್ಲಿ ಯಶವಂಪುರ ಎಪಿಎಂಸಿಯಿಂದ ಶ್ರೀಗಂಧ ಕಾವಲು ಗ್ರಾಮದ ೧೭೨ ಎಕರೆ ೨೨ ಗುಂಟೆ ಹಾಗೂ ಇದಕ್ಕೆ ಹೊಂದಿಕೊಂಡ ಹೇರೋಹಳ್ಳಿ ಗ್ರಾಮದ ೧೦೦ ಎಕರೆ ೧೧ ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.
ಜಮನ್‌ಲಾಲ್ ಬಜಾಜ್ ಸೇವಾ ಟ್ರಸ್ಟ್ ಭೂಸ್ವಾಧೀನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಹೈಕೋರ್ಟ್‌ನಲ್ಲಿ ಎಪಿಎಂಸಿ ಪರವಾಗಿ ತೀರ್ಪು ಬಂದಿದ್ದು, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ವಾರ ಸುಪ್ರೀಂ ಕೋರ್ಟ್‌ನಲ್ಲಿ ಎಪಿಎಂಸಿ ಪರವಾಗಿ ತೀರ್ಪು ಬಂದಿದೆ. ಭೂಸ್ವಾಧೀನ ಪರಿಹಾರಕ್ಕೆ ೧೮೬ ಕೋಟಿ ರೂ. ಪಾವತಿಸಲಾಗಿದೆ ಎಂದು ಹೇಳಿದರು.
ಹಣ್ಣು, ಹೂವು, ತರಕಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಯೋಜನೆಗೆ ೨೦೦೩ರಲ್ಲಿ ಸರ್ಜಾಪುರ ಹೋಬಳಿಯ ಗೂಳಿಮಂಗಲದಲ್ಲಿ ೪೨ ಎಕರೆ ೩೧ ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣ ಕೂಡ ಸುಪ್ರೀಂ ಕೋರ್ಟ್‌ವರೆಗೆ ಹೋಗಿದ್ದು, ಹೈಕೋರ್ಟ್‌ನಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳಲು ನಿರ್ದೇಶನ ನೀಡಿದ್ದು, ಈಚೆಗೆ ಹೈಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದ್ದು, ೨೧೧.೩೭ ಕೋಟಿ ರೂ.ಗಳನ್ನು ನ್ಯಾಯಾಲಯಕ್ಕೆ ಪಾವತಿ ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಎಪಿಎಂಸಿಯಿಂದ ಕಾರಟಗಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ನಿರ್ಮಾಣಕ್ಕೆ ೨೦೧೨ರಲ್ಲಿ ೧೩೬ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಚದರ ಅಡಿಗೆ ೫೦ ರೂ. ಪರಿಹಾರ ನೀಡಲು ಆದೇಶ ಮಾಡಿತ್ತು.
ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ತೀರ್ಪು ಎಪಿಎಂಸಿ ಪರವಾಗಿ ಬಂದಿದೆ. ಪರಿಹಾರಕ್ಕೆ ೧೨ ಕೋಟಿ ರೂ.ಗಳನ್ನು ಪಾವತಿ ಮಾಡಲಾಗಿದೆ.
ಭೂಸ್ವಾಧೀನ ಪ್ರಕರಣಗಳು ಇತ್ಯರ್ಥವಾಗದ ಕಾರಣ ಉದ್ದೇಶಿತ ಯೋಜನೆಳನ್ನು ಕೈಗೊಳ್ಳಲು ಸಮಸ್ಯೆಯಾಗಿತ್ತು. ಹೀಗಾಗಿ ಎಪಿಎಂಸಿ ಪರವಾಗಿ ವಾದ ಮಾಡಲು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ನ್ಯಾಯವಾದಿಗಳನ್ನು ನೇಮಕ ಮಾಡಿ, ಎಪಿಎಂಸಿ ಉದ್ದೇಶಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸಫಲವಾಗಿದ್ದರಿಂದ ತೀರ್ಪು ನಮ್ಮ ಪರವಾಗಿ ಬಂದಿದೆ. ಹೀಗಾಗಿ ಉದ್ದೇಶಿತ ಯೋಜನೆಗಳನ್ನು ಕೈಗೊಳ್ಳಲು ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ ಎಂದು ವಿವರಿಸಿದರು.
ಎಪಿಎಂಸಿಗೆ ಬಿಎಂಟಿಸಿ ಭೂಮಿ
ದಾಸನಪುರ ಎಪಿಎಂಸಿಗೆ ಹೊಂದಿಕೊಂಡಿರುವ ಬಿಎಂಟಿಸಿಯ ೧೨ ಎಕರೆ ಭೂಮಿಯನ್ನು ಬಾಡಿಗೆ ಆಧಾರದ ಮೇಲೆ ಎಪಿಎಂಸಿಗೆ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಯಶವಂತಪುರ ಮಾರುಕಟ್ಟೆಯಿಂದ ದಾಸನಪುರ ಮಾರುಕಟ್ಟೆಗೆ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮತ್ತು ಶುಂಠಿ ವಹಿವಾಟನ್ನು ದಾಸನಪುರಕ್ಕೆ ಸ್ಥಳಾಂತರ ಮಾಡಲಿದ್ದು, ಬಿಎಂಟಿಸಿ ಭೂಮಿ ಲಭ್ಯವಾಗಿರುವುದು ಮಾರುಕಟ್ಟೆ ಚಟುವಟಿಕೆಗಳಿಗೆ ಅನುಕೂಲವಾಗಲಿದೆ .
ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಅಧಿಕ ಪ್ರಮಾಣದಲ್ಲಿ ಆಗಮಿಸುತ್ತಿದ್ದು, ನೂರಾರು ಲಾರಿಗಳು ಬರುವುದರಿಂದ ಯಶವಂಪುರ ಬಳಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಈ ನಾಲ್ಕು ಕೃಷಿ ಉತ್ಪನ್ನಗಳ ವಹಿವಾಟನ್ನು ದಾಸನಪುರಕ್ಕೆ ಸ್ಥಳಾಂತರ ಮಾಡಿದರೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸಚಿವರು ಹೇಳಿದರು.
ಈಗ ಎಪಿಎಂಸಿ ಸ್ವಾಧೀನಕ್ಕೆ ಪಡೆದಿರುವ ಶ್ರೀಗಂಧ ಕಾವಲು ಮತ್ತು ಹೇರೋಹಳ್ಳಿಯಲ್ಲಿ ಮೆಗಾ ಮಾರುಕಟ್ಟೆ, ಗೂಳಿ ಮಂಗಲದಲ್ಲಿ ಹಣ್ಣು, ಹೂವು, ತರಕಾರಿ ಮಾರುಕಟ್ಟೆ ಹಾಗೂ ಕಾರಟಗಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಭೂಸ್ವಾಧೀನ ಪ್ರಕರಣಗಳಲ್ಲಿ ತೀರ್ಪು ನಮ್ಮ ಪರವಾಗಿ ಬಂದಿರುವುದರಿಂದ ಈ ಯೋಜನೆಗಳನ್ನು ಕೈಗೊಳ್ಳಲು ಇದ್ದ ಅಡ್ಡಿ ನಿವಾರಣೆಯಾಗಿದೆ .
ಶಿವಾನಂದ ಪಾಟೀಲ
ಕೃಷಿ ಮಾರುಕಟ್ಟೆ ಸಚಿವ
ಎಲ್ಲೆಲ್ಲಿ ಎಷ್ಟು ಭೂಮಿ ಸ್ವಾಧೀನ
೧. ಶ್ರೀಗಂಧ ಕಾವಲು ಮತ್ತು ಹೇರೋಹಳ್ಳಿಯಲ್ಲಿ ೨೭೨ ಎಕರೆ ೩೩ ಗುಂಟೆ
೨. ಗೂಳಿಮಂಗಲದಲ್ಲಿ ೪೨ ಎಕರೆ ೩೧ ಗುಂಟೆ
೩. ಗಂಗಾವತಿ ತಾಲೂಕು ಕಾರಟಗಿ ೧೩೬ ಎಕರೆ
























