
ಕಲಬುರಗಿ: ಏ.27:ನಗರದ ಮಹ್ಮದ ಹಸಖಾನ ಭವನ, ಹಮಾಲವಾಡಿ, ಸ್ಟೇಷನ್ ಬಜಾರ್ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘದ ವತಿಯಿಂದ ಆಯೋಜಿಸಲಾದ ಒಂಟಿ ಮಹಿಳೆಯರ ಪ್ರಥಮ ಸಮಾವೇಶದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ ಮಾತನಾಡಿ, ಸಮಾಜದಲ್ಲಿ ಒಂಟಿ ಮಹಿಳೆಯರು ಎದುರಿಸುತ್ತಿರುವ ಸಾಮಾಜಿಕ ಬಹಿಷ್ಕಾರ, ಅವಮಾನ, ಆರ್ಥಿಕ ಸಂಕಷ್ಟ ಹಾಗೂ ಲಿಂಗ ತಾರತಮ್ಯಗಳ ವಿರುದ್ಧ ಸರ್ಕಾರಗಳು ತಕ್ಷಣವೇ ಸಮಗ್ರ ಪುನರ್ವಸತಿ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಒಂಟಿ ಮಹಿಳೆಯರು ಕೇವಲ ಲಿಂಗ ತಾರತಮ್ಯಕ್ಕೆ ಮಾತ್ರವಲ್ಲದೆ ಜಾತಿ, ಧರ್ಮ ಹಾಗೂ ಸಾಮಾಜಿಕ ಕಟ್ಟಳೆಗಳ ಹೆಸರಿನಲ್ಲಿ ತೀವ್ರ ಶೋಷಣೆಗೆ ಒಳಗಾಗುತ್ತಿದ್ದಾರೆ. ಅವಿವಾಹಿತರು, ಗಂಡ ಬಿಟ್ಟವರು, ವಿಧವೆಯರು ಹಾಗೂ ದೇವದಾಸಿ ಪದ್ಧತಿಗೆ ಬಲಿಯಾದ ಮಹಿಳೆಯರು ಸಮಾಜದಲ್ಲಿ ನಿರಂತರ ಅವಮಾನ, ನಿಂದನೆ ಮತ್ತು ದೌರ್ಜನ್ಯ ಅನುಭವಿಸುತ್ತಿದ್ದು, ಗೌರವಯುತ ಬದುಕು ನಡೆಸಲು ಅವಕಾಶಗಳಿಂದ ವಂಚಿತರಾಗಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪುರುಷರಿಗೆ ಮರುಮದುವೆಗೆ ಸಾಮಾಜಿಕ ಬೆಂಬಲ ದೊರೆಯುತ್ತಿದ್ದರೂ, ಮಹಿಳೆಯರಿಗೆ ಮರುಮದುವೆ ಹಾಗೂ ಸ್ವತಂತ್ರ ಬದುಕಿನ ಹಕ್ಕು ನಿರಾಕರಿಸಲಾಗುತ್ತಿದೆ. ಗಂಡ ಸತ್ತ ಮಹಿಳೆಯರನ್ನು ಸಾಮಾಜಿಕವಾಗಿ ಹೀನಾಯವಾಗಿ ಕಾಣುವುದು, ಶುಭ ಕಾರ್ಯಗಳಿಂದ ದೂರ ಇಡುವುದು, ಸಂಪ್ರದಾಯದ ಹೆಸರಿನಲ್ಲಿ ಕಟ್ಟಳೆ ಹೇರಿಸುವುದು ಇಂದಿಗೂ ಮುಂದುವರಿದಿದೆ ಎಂದು ಅವರು ಟೀಕಿಸಿದರು.
ಆರ್ಥಿಕ ಅಸಮಾನತೆ, ಆಸ್ತಿ ಹಕ್ಕಿನ ನಿರಾಕರಣೆ, ಉದ್ಯೋಗಾವಕಾಶಗಳ ಕೊರತೆ ಹಾಗೂ ಲೈಂಗಿಕ ದೌರ್ಜನ್ಯಗಳಿಂದ ಅನೇಕ ಒಂಟಿ ಮಹಿಳೆಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರ್ಕಾರವು ದೇವದಾಸಿ ಪುನರ್ವಸತಿ ಮಾದರಿಯಲ್ಲಿ ದೇವದಾಸಿಯೇತರ ಒಂಟಿ ಮಹಿಳೆಯರನ್ನೂ ಪ್ರತ್ಯೇಕವಾಗಿ ಗುರುತಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸಮಾವೇಶದಲ್ಲಿ ಒಂಟಿ ಮಹಿಳೆಯರ ಪರವಾಗಿ ಹಲವು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಮಾಸಿಕ ಕನಿಷ್ಠ ರೂ.6 ಸಾವಿರ ಸಹಾಯಧನ, ಉಚಿತ ಮನೆ, ಬಿಪಿಎಲ್ ಸೌಲಭ್ಯ, ಸ್ವಯಂ ಉದ್ಯೋಗ ತರಬೇತಿ, ಬಡ್ಡಿರಹಿತ ಸಾಲ, ಕೃಷಿ ಜಮೀನು, ಮಕ್ಕಳ ಶಿಕ್ಷಣ ಮತ್ತು ಉದ್ಯೋಗ ನೆರವು, ವೃದ್ಧಾಶ್ರಮಗಳ ಸ್ಥಾಪನೆ ಸೇರಿದಂತೆ ಸರ್ಕಾರದ ಬಜೆಟ್‍ನಲ್ಲಿ ಶೇ.33ರಷ್ಟು ಅನುದಾನವನ್ನು ಒಂಟಿ ಮಹಿಳೆಯರ ಪುನರ್ವಸತಿಗೆ ಮೀಸಲಿಡಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಂಚಾಲಕಿ ಚಂದಮ್ಮ ಗೋಳಾ, ಮೀನಾಕ್ಷಿ ದನ್ನಿ, ಶೋಭಾ ಭೋಪಾಲ್ ತೆಗನೂರ, ಭೀಮ್ ಬಾಯಿ ಬೈರಾಮಡಗಿ, ಮಪುರಿ ಗೊಬ್ಬುರ್, ಪುತಳಿ ಬಾಯಿ, ರಾಜಶ್ರೀ, ಅಶ್ವಿನಿ ಲತಾ, ಗೌರಮ್ಮ ಸುಧಾನಿ ಧನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




















