Home ಜಿಲ್ಲೆ ಬೆಂಗಳೂರು ಅಕ್ರಮ ಪ್ಲಾಸ್ಟಿಕ್ ಸಂಗ್ರಹ: ೨ ಲಕ್ಷ ರೂ.ದಂಡ

ಅಕ್ರಮ ಪ್ಲಾಸ್ಟಿಕ್ ಸಂಗ್ರಹ: ೨ ಲಕ್ಷ ರೂ.ದಂಡ

ಬೆಂಗಳೂರು,ಏ.೧೫: ನಗರದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಮಹತ್ವ ನೀಡುತ್ತಿರುವ ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಅಕ್ರಮ ಪ್ಲಾಸ್ಟಿಕ್ ಸಂಗ್ರಹಣೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ ೧೨೬ರ ಮಾರುತಿ ಮಂದಿರ ಪ್ರದೇಶದಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಸಂಗ್ರಹಣೆ ಮತ್ತು ವ್ಯಾಪಾರ ನಡೆಸುತ್ತಿದ್ದ ಪ್ರಕರಣ ಪತ್ತೆಯಾಗಿ, ಸಂಬಂಧಿಸಿದ ವ್ಯಾಪಾರಿಗೆ ೨ ಲಕ್ಷ ದಂಡ ವಿಧಿಸಲಾಗಿದೆ.


ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ “ಬಾಲಾಜಿ ಪಾಲಿ ಪ್ಯಾಕ್’ ಎಂಬ ವ್ಯಾಪಾರಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಹಾಗೂ NWPP ಬ್ಯಾಗ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ನಗರಭಾವಿ ಮುಖ್ಯರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದು, ಮೂಡಲಪಾಳ್ಯ ಅನುಭವನಗರ ೨ನೇ ಕ್ರಾಸ್‌ನ ವಾಸಸ್ಥಳ ಕಟ್ಟಡದಲ್ಲಿ ಗೋದಾಮು ಇಟ್ಟುಕೊಂಡಿರುವುದೂ ಪತ್ತೆಯಾಗಿದೆ.


ದಾಳಿ ವೇಳೆ ಸುಮಾರು ೧೦೦ ಕೆ.ಜಿ. ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಅವನ್ನು ವಾರ್ಡ್ ಕಚೇರಿಯಲ್ಲಿ ಠೇವಣಿ ಮಾಡಲಾಗಿದೆ. ಮುಂದಿನ ಕ್ರಮಕ್ಕಾಗಿ ಈ ವಸ್ತುಗಳನ್ನು KCDCಗೆ ಕಳುಹಿಸಲು ತೀರ್ಮಾನಿಸಲಾಗಿದೆ.


ಇದೇ ವೇಳೆ, ಸಂಬಂಧಿತ ವ್ಯಾಪಾರಿಗೆ ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಚಟುವಟಿಕೆ ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.


ನಗರದಲ್ಲಿ ಪ್ಲಾಸ್ಟಿಕ್ ನಿಷೇಧದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಾಲಿಕೆ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.