
ಜಮಖಂಡಿ: ಏ.25:ಅಬಕಾರಿ ಅಪರ ಆಯುಕ್ತರ ಕೇಂದ್ರಸ್ಥಾನ ಬೆಳಗಾವಿ, ಅಬಕಾರಿ ಜಂಟಿ ಆಯುಕ್ತರು ಜಾರಿ ಮತ್ತು ತನಿಖೆ ಬೆಳಗಾವಿ ವಿಭಾಗ, ಅಬಕಾರಿ ಉಪ ಆಯುಕ್ತರು ಬಾಗಲಕೋಟ ಜಿಲ್ಲೆ ಹಾಗೂ ಉಪ ಅಧೀಕ್ಷಕರು ಬಾಗಲಕೋಟ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ, ಅಬಕಾರಿ ನಿರೀಕ್ಷಕಿ ಗೀತಾ ತೆಗ್ಯಾಳ ಅವರ ನೇತೃತ್ವದ ತಂಡ ದಾಳಿ ನಡೆಸಿತು.
ಜಮಖಂಡಿ ವಲಯ ವ್ಯಾಪ್ತಿಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮ ವ್ಯಾಪ್ತಿಯ ನಾವಲಗಿ-ಮುಧೋಳ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಮಧ್ಯರಾತ್ರಿ ಸುಮಾರು 1.30 ಗಂಟೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಯಿತು.
ಸ್ಥಳದಲ್ಲಿಯೇ ವಾಹನ ಸವಾರ ಹನುಮಂತ ಮಾರುತಿ ಬಿಸನಾಳ (21), ಸಾ: ನಾವಲಗಿ ಅವರನ್ನು ಬಂಧಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುನೀಲ ಕದಂ, ವಾಹನದ ಮಾಲೀಕ, ಮದ್ಯ ಸರಬರಾಜು ಮಾಡಿದ ಅಬಕಾರಿ ಸನ್ನದುದಾರ ಹಾಗೂ ಬಸವರಾಜ (ಕಾರಿನಲ್ಲಿ ಮದ್ಯ ಸರಬರಾಜು ಮಾಡಿದವನು) ವಿರುದ್ಧವೂ ಪ್ರಕರಣ ದಾಖಲಾಗಿದೆ.
ಆರೋಪಿತನಿಂದ ಒಟ್ಟು 103.680 ಲೀಟರ್ ಭಾರತೀಯ ತಯಾರಿಕಾ ಮದ್ಯ, ಹೀರೋ ಕಂಪನಿಯ ಊಈ ಡಿಲಕ್ಸ್ ದ್ವಿಚಕ್ರ ವಾಹನ (ಕೆಎ-48 ಇಡಿ-9154) ಹಾಗೂ ಒಂದು ಮೊಬೈಲ್ ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ?1,26,600 ಆಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಜಮಖಂಡಿ ವಲಯ ಕಚೇರಿಯಲ್ಲಿ ಅಬಕಾರಿ ನಿರೀಕ್ಷಕಿ ಗೀತಾ ತೆಗ್ಯಾಳ ಪ್ರಕರಣ ದಾಖಲಿಸಿದ್ದು, ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ






















