Home ಕ್ರೈಂ ಸುದ್ದಿಗಳು ಭೀಕರ ಅಪಘಾತ:೯ಮಂದಿ ಭಕ್ತರ ದುರ್ಮರಣ

ಭೀಕರ ಅಪಘಾತ:೯ಮಂದಿ ಭಕ್ತರ ದುರ್ಮರಣ

ಮೃತರು ಚಿಕ್ಕಮಗಳೂರಿನವರು
ರಾಯಚೂರು, ಏ.೧೬-
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವಕುಂಟ ಗ್ರಾಮದ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿಕ್ಕಮಗಳೂರು ಜಿಲ್ಲೆಯ ೯ ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಮೂಲದ ಭಕ್ತರು ರಾಯರ ದರ್ಶನಕ್ಕಾಗಿ ಬೊಲೆರೊ ವಾಹನದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.


ಚಿಕ್ಕಮಗಳೂರು ಜಿಲ್ಲೆಯ ಕುಮಾರ್(೫೦), ದೀಪಿಕಾ, ವೀಣಾ(೪೨), ಸುನೀಲ್ (೪೦), ಪುಟ್ಟಮ್ಮ(೫೫), ಲೋಲಾಕ್ಷಿ, ಯಶೋಧಾ(೬೦) ಹಾಗೂ ಬಾಲಕಿ ಬೆಳ್ಳಿ(೫) ಮೃತಪಟ್ಟವರು.


ಚಿಕ್ಕಮಗಳೂರು ಜಿಲ್ಲೆಯಿಂದ ಒಟ್ಟು ೨೧ ಮಂದಿ ಭಕ್ತರು ಬೊಲೆರೊ ವಾಹನದಲ್ಲಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದಾಗ ಕಲ್ಲುದೇವಕುಂಟ ಬಳಿ ಎದುರುಗಡೆಯಿಂದ ಬಂದ ಸಿಮೆಂಟ್ ಮತ್ತು ಜಲ್ಲಿಕಲ್ಲು ತುಂಬಿದ್ದ ಟ್ಯಾಂಕರ್, ಬೊಲೆರೊ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.


ಡಿಕ್ಕಿಯ ರಭಸಕ್ಕೆ ಆರು ಮಂದಿ ಭಕ್ತರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಉಳಿದ ೧೩ ಭಕ್ತರನ್ನು ತಕ್ಷಣವೇ ಎಮಿಗನೂರು ಮತ್ತು ಕರ್ನೂಲ್ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಅಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.


ಘಟನೆಯಿಂದಾಗಿ ಮಂತ್ರಾಲಯಕ್ಕೆ ಹೋಗುವ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಂತ್ರಾಲಯ ಠಾಣೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದುಕೊಂಡು ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.