
ಬೆಂಗಳೂರು, ಜ.೯: ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಎ) ಚುನಾವಣೆ ಪ್ರಕ್ರಿಯೆಗೆ ಗಮನಾರ್ಹ ‘ವೇಗ’ ಸಿಕ್ಕಿದೆ. ಜಿಬಿಎ ವ್ಯಾಪ್ತಿಯ ೩೬೯ ವಾರ್ಡುಗಳಿಗೆ ಸಂಬಂಧಿಸಿದ ಮೀಸಲಾತಿ ಕರಡು ಪಟ್ಟಿ ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಇಂದು ಪ್ರಕಟಿಸಿದೆ.
ಈ ಪಟ್ಟಿಯ ಬಗ್ಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಪ್ರಕಟಗೊಂಡ ೧೫ ದಿನದೊಳಗೆ ಅಂದರೆ ಜನವರಿ ೨೩ರ ಸಂಜೆ ೫.೩೦ರ ಒಳಗೆ ಸಲ್ಲಿಸಬೇಕಿದೆ. ಈ ಪ್ರಕ್ರಿಯೆಯ ನಂತರ ಜನವರಿ ತಿಂಗಳ ಅಂತ್ಯದೊಳಗೆ ವಾರ್ಡ್‌ಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ವಾರ್ಡ್ ಗಡಿ ನಿಗದಿ ಮತ್ತು ವಿಂಗಡಣೆ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಣೆ ಮಾತ್ರ ಬಾಕಿ ಉಳಿದಿದ್ದು ಈಗ ಅದು ಪ್ರಕಟಗೊಂಡಿದ್ದು,
ಕರ್ನಾಟಕ ರಾಜ್ಯ ಪತ್ರದಲ್ಲಿ ವಾರ್ಡ್‌ಗಳ ಮೀಸಲಾತಿಯ ಕರಡು ಪಟ್ಟಿ ಪ್ರಕಟಿಸಲಾಗಿದೆ.
ಕರ್ನಾಟಕ ರಾಜ್ಯ ಪತ್ರದಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ೬೩, ಬೆಂಗಳೂರು ಉತ್ತರ ನಗರ ಪಾಲಿಕೆಯ ೭೨, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ೭೨, ಬೆಂಗಳೂರು ಪೂರ್ವ ನಗರ ಪಾಲಿಕೆಯ ೫೦, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ೧೧೨ ವಾರ್ಡ್ ಗಳಿಗೆ ಕರಡು ಮೀಸಲಾತಿಯನ್ನು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ನಂದಕುಮಾರ್ ಬಿ. ಅವರು ಪ್ರಕಟಿಸಿದ್ದಾರೆ.
ಗರಿಗೆದರಿದ ರಾಜಕೀಯ ಚಟುವಟಿಕೆ
ಬೆಂಗಳೂರು ನಗರ ಪಾಲಿಕೆಯ ೩೬೯ ವಾರ್ಡ್ ಗಳ ಚುನಾವಣೆಗೆ ಕರಡು ಮೀಸಲಾತಿ ಅಧಿಸೂಚನೆ ಹೊರಬಿಳುತ್ತಿದ್ದಂತೆಯೇ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬೆಂಗಳೂರು ನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಇಡಿಯಲು ಉಭಯ ಪಕ್ಷಗಳು ಈಗಾಗಲೇ ಸಕ್ರಿಯಗೊಂಡಿವೆ. ನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೇಲುಗೈ ಸಾಧಿಸಬಹುದೆಂಬ ಲೆಕ್ಕಾಚಾರದಲ್ಲಿರುವ ಪಕ್ಷಗಳು, ಸ್ಥಳೀಯ ಕಾರ್ಯಕರ್ತರು ಎಚ್ಚೆತ್ತುಕೊಳ್ಳುವಂತೆ ಕರೆ ನೀಡಿವೆ.
ವಾರ್ಡ್ ವಾರು ಮೀಸಲಾತಿ ವಿವರ:
- ಬೆಂಗಳೂರು ದಕ್ಷಿಣ ನಗರ ಪಾಲಿಕೆ (೭೨ ವಾರ್ಡುಗಳು): ಎಸ್.ಸಿ. ೭, ಎಸ್.ಟಿ. ೧ , ಹಿಂದುಳಿದ-ಎ ೧೯ , ಹಿಂದುಳಿದ-ಬಿ ೫, ಸಾಮಾನ್ಯ ೨೦ (ಒಟ್ಟು ಶೇ.೫೦ ಮಹಿಳಾ ಮೀಸಲಾತಿ).
- ಬೆಂಗಳೂರು ಉತ್ತರ ನಗರ ಪಾಲಿಕೆ (೭೨): ಎಸ್.ಸಿ. ೯, ಎಸ್.ಟಿ. ೨, ಹಿಂದುಳಿದ-ಎ ೧೯, ಹಿಂದುಳಿದ-ಬಿ ೫, ಸಾಮಾನ್ಯ ೫.
- ಬೆಂಗಳೂರು ಪಶ್ಚಿಮ ನಗರ ಪಾಲಿಕೆ (೧೧೨): ಎಸ್.ಸಿ. ೯, ಎಸ್.ಟಿ. ೯, ಹಿಂದುಳಿದ-ಎ ೩೦, ಹಿಂದುಳಿದ-ಬಿ ೭, ಸಾಮಾನ್ಯ ೬೪.
- ಬೆಂಗಳೂರು ಕೇಂದ್ರ ನಗರ ಪಾಲಿಕೆ (೬೩): ಎಸ್.ಸಿ. ೧, ಎಸ್.ಟಿ. ೧, ಹಿಂದುಳಿದ-ಎ ೧೫, ಹಿಂದುಳಿದ-ಬಿ ೪, ಸಾಮಾನ್ಯ ೩೨.
- ಬೆಂಗಳೂರು ಪೂರ್ವ ನಗರ ಪಾಲಿಕೆ (೫೦): ಎಸ್.ಸಿ. ೭, ಎಸ್.ಟಿ. ೧, ಹಿಂದುಳಿದ-ಎ ೧೪, ಹಿಂದುಳಿದ-ಬಿ ೩, ಸಾಮಾನ್ಯ ೨೫.
ಪ್ರಮುಖಾಂಶಗಳು- ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಎ) ಚುನಾವಣೆ
- ಸರ್ಕಾರದಿಂದ ೩೬೯ ವಾರ್ಡುಗಳ ಮೀಸಲಾತಿ ಕರಡು ಪಟ್ಟಿ ಘೋಷಣೆ
- ಕರಡು ಪ್ರಕಟಗೊಂಡ ೧೫ ದಿನಗಳ ಒಳಗೆ ಅಂದರೆ ೨೩ರ ಸಂಜೆ ೫.೩೦ರ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
- ಜನವರಿ ಅಂತ್ಯದೊಳಗೆ ಅಂತಿಮಗೊಳಿಸಲು ಯೋಜನೆ




























