
ಹುಬ್ಬಳ್ಳಿ, ಜ. ೭- ಹುಬ್ಬಳ್ಳಿಯ ಕೇಶವಾಪುರ ಪೊಲೀಸ್ ಠಾಣೆಯ ಪೊಲೀಸರು ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ ಬಿಜೆಪಿ ಮಹಿಳಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಕಾಂಗ್ರೆಸ್‌ನ ನಗರಪಾಲಿಕೆ ಸದಸ್ಯೆ ನೀಡಿದ ದೂರಿನ ಮೇರೆಗೆ ಪೊಲೀಸರು ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಬಟ್ಟೆ ಬಿಚ್ಚಿಸಿ, ಥಳಿಸಿ ದರ್ಪ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಗೆ ಹಳೆಯ ವೈಷಮ್ಯವೇ ಕಾರಣ ಎಂದು ಹೇಳಲಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು. ಬೂತ್ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ ತಮ್ಮನ್ನು ಮತಪಟ್ಟಿಯಿಂದ ತೆಗೆಸಿ ಹಾಕಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಿಕ್ಕಾಟ ನಡೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲ ದೂರು ನೀಡಿದ್ದರು . ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ದೂರು ದಾಖಲಿಸಿದ್ದರು.
ಕಾಂಗ್ರೆಸ್‌ನ ನಗರಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಬಂಧಿಸಲು ಹೋದಾಗ ಆಕೆ ಪ್ರತಿರೋಧ ತೋರಿ ಚೀರಾಡಿದ್ದಾರೆ. ಅಷ್ಟಕ್ಕೆ ಪೊಲೀಸರು ಆಕೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪೊಲೀಸರು ಮಹಿಳೆಯನ್ನು ಥಳಿಸಿದ್ದರಲ್ಲದೆ ಬಂಧನದ ವೇಳೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಮತ್ತೊಂದು ದೂರು ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.
ಪೊಲೀಸರು ವಿವಸ್ತ್ರಗೊಳಿಸಿಲ್ಲ ಆಕೆಯೇ ಬಟ್ಟೆ ಬಿಚ್ಚಿ ಸೀನ್ ಕ್ರಿಯೇಟ್ ಮಾಡಿದ್ದಾಳೆ: ಪೊಲೀಸ್ ಆಯುಕ್ತ
ಹುಬ್ಬಳ್ಳಿಯ ಕೇಶವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತೆಯ ಬಟ್ಟೆ ಬಿಚ್ಚಿ ಪೊಲೀಸರು ಥಳಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಈ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿರುವ ಹುಬ್ಬಳ್ಳಿ ಪೊಲೀಸ್ ಆಯುಕ್ತ ಶಶಿಕುಮಾರ್, ಮಹಿಳೆಯೇ ಬಟ್ಟೆ ಬಿಚ್ಚಿ ಸೀನ್ ಕ್ರಿಯೇಟ್ ಮಾಡಿದ್ದಾಳೆ. ಆಕೆಯ ವಿರುದ್ಧ ೯ ಪ್ರಕರಣಗಳು ಇವೆ ಎಂದು ತಿಳಿಸಿದ್ದಾರೆ.
ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆಯಲು ಹೋದಾಗ ಆಕೆ ವಿವಸ್ತ್ರಳಾಗಿರಲಿಲ್ಲ. ವ್ಯಾನ್ ಹತ್ತಿದ ಮೇಲೆ ತಾನೇ ಬಟ್ಟೆ ಬಿಚ್ಚಿ ಸೀನ್ ಕ್ರಿಯೆಟ್ ಮಾಡಿದ್ದಾಳೆ ಎಂದರು.
ಬಂಧಿತ ಮಹಿಳೆಯಿಂದ ೨೦೨೦ ರಿಂದಲೂ ಐದು ಪ್ರಕರಣಗಳು ದಾಖಲಾಗಿವೆ. ಈ ವರ್ಷ ನಾಲ್ಕು ಪ್ರಕರಣಗಳು ಸೇರಿ ಒಟ್ಟು ೯ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು
ಈ ಹಿಂದಿನ ಪ್ರಕರಣಗಳಲ್ಲಿ ಮಹಿಳೆಯ ನಡವಳಿಕೆ ಬಗ್ಗೆ ಮಾಹಿತಿ ಇದ್ದ ಕೇಶವಾಪುರ ಪೊಲೀಸರು ಮಹಿಳೆಯನ್ನು ಬಂಧಿಸಲು ಹೆಚ್ಚವರಿ ಮಹಿಳಾ ಸಿಬ್ಬಂದಿನಯ್ನು ಕರೆಸಿಕೊಂಡಿದ್ದರು. ಪೊಲೀಸರು ವಶಕ್ಕೆ ಪಡೆದು ಬಂಧಿಸುವಾಗ ಆಕೆ ಬೆತ್ತಲೆಯಾಗಿರಲಿಲ್ಲ. ವ್ಯಾನ್ ಹತ್ತಿದ ಬಳಿಕ ಆಕೆಯೇ ಬಟ್ಟೆ ಬಿಚ್ಚಿದ್ದಾಳೆ. ಮಹಿಳಾ ಹಾಗೂ ಪುರುಷ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಹೇಳಿದರು.
ಮತಪಟ್ಟಿ ಪರಿಷ್ಕರಣೆಗೆ ಹೋದಾಗ ಸ್ಥಳೀಯರ ನಡುವೆ ಸಂಘರ್ಷ ಗಲಾಟೆ ನಡೆದಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ ನಂತರ ದೂರು ದಾಖಲಾಗಿದೆ. ಸ್ಥಳೀಯರಾದ ಪ್ರಶಾಂತ್ ಬಬ್ಬಾಗಿ ಅವರು ನೀಡಿರುವ ದೂರನ್ನಾಧರಿಸಿ ಕೇಶವಾಪುರ ಪೊಲೀಸರು ದಾಖಲಿಸಿ ಪ್ರಮುಖ ಆರೋಪಿಯಾಗಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರಿಗೆ ಕತ್ತು ಹಿಸಕಲು ಹೋಗಿದ್ದು, ಖಾಸಗಿ ಅಂಗಕ್ಕೆ ಹೊಡೆದಿದ್ದು ಸಾಕ್ಷ್ಯ ಸಿಕ್ಕಿದ ಮೇಲೆ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಮಹಿಳೆಯನ್ನು ವ್ಯಾನ್ ಒಳಗೆ ಹತ್ತಿಸುತ್ತಿದ್ದಂತೆಯೇ ಆಕೆ ಖುದ್ದಾಗಿ ಬಟ್ಟೆ ಬಿಚ್ಚಿದ್ದಾಳೆ. ಅಲ್ಲದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ. ಕಲಾವತಿ ಚಂದಾವರ್ಕರ್, ಶಕುಂತಲಾ, ರೇಖಾ ಮತ್ತು ಮಾರ್ಗರೆಟ್ ಎಂಬ ಸಿಬ್ಬಂದಿಗಳಿಗೆ ಕಚ್ಚಿ ಘಾಸಿಗೊಳಿಸಿದ್ದಾಳೆ . ಓರ್ವ ಸಿಬ್ಬಂದಿಗೆ ಹೊಟ್ಟೆ ಭಾಗಕ್ಕೆ ರಕ್ತ ಬರುವಂತ ಕಚ್ಚಿದ್ದಾಳೆ. ಆದರೆ ಈ ವಿಡಿಯೋವನ್ನು ಯಾರು ವೈರಲ್ ಮಾಡಿದ್ದಾರೋ ಗೊತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಒಂದು ವೇಳೆ ಪೊಲೀಸರು ಆ ರೀತಿ ನಡೆದುಕೊಂಡಿದ್ದರೆ ನ್ಯಾಯಾಧೀಶರ ಮುಂದೆ ಹೇಳಲು ಅವಕಾಶವಿತ್ತು. ಆದರೆ ಆಕೆ ಏನು ಹೇಳಲಿಲ್ಲ. ಬಟ್ಟೆ ಬಿಚ್ಚಿದ್ದಾಗ ಪೊಲೀಸರೆ ಸ್ಥಳೀಯರ ಸಹಾಯದಿಂದ ಆಕೆಗೆ ಬೇರೆ ಬಟ್ಟೆ ಹಾಕಿಸಿದ್ದಾರೆ ಎಂದು ಆಯುಕ್ತ ಶಶಿಕುಮಾರ್ ತಿಳಿಸಿದರು.


























