ಬಳ್ಳಾರಿ ಗಲಭೆ ಸಿಬಿಐ ತನಿಖೆಯಿಲ್ಲ

ಬೆಂಗಳೂರು, ಜ. ೮- ಬಳ್ಳಾರಿ ಗಲಭೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂಬ ಬೇಡಿಕೆಗಳನ್ನು ತಳ್ಳಿ ಹಾಕಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಈ ಬಗ್ಗೆ ಸಿಬಿಐ ತನಿಖೆ ಅಗತ್ಯವಿಲ್ಲ, ಸಿಬಿಐ ತನಿಖೆಗೆ ಕೊಡಲ್ಲ ಎಂದು ಸ್ಪಷ್ಟಪಡಿಸಿದರು.


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸರೇ ತನಿಖೆ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಎಲ್ಲವನ್ನು ನಿಭಾಯಿಸುವ ಶಕ್ತಿ ಹೊಂದಿದ್ದಾರೆ. ಅವರ ಕೈಯಲ್ಲಿ ಆಗಲ್ಲ ಎಂಬ ಸಂದರ್ಭ ಬಂದರೆ ನಾವು ಸಿಬಿಐಗೆ ಕೊಡಬಹುದು. ಆದರೆ, ಅಂಥ ಸಂದರ್ಭ ಇಲ್ಲ. ಹಾಗಾಗಿ ಸಿಬಿಐ ತನಿಖೆ ಅಗತ್ಯವಿಲ್ಲ ಎಂದರು. ನಾವು ಯಾವುದೇ ಪ್ರಕರಣಗಳನ್ನು ಸಿಬಿಐಗೆ ಕೊಡಲ್ಲ ಎಂಬ ನಿರ್ಧಾರಗಳನ್ನು ಸಚಿವ ಸಂಪುಟದಲ್ಲಿ ಮಾಡಿದ್ದೇವೆ. ಆಯ್ದ ಸಂದರ್ಭಗಳಲ್ಲಿ ಮಾತ್ರ ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ. ಆದರೆ, ಬಳ್ಳಾರಿ ಗಲಭೆ ಬಗ್ಗೆ ಸಿಬಿಐ ತನಿಖೆ ಅಗತ್ಯವಿಲ್ಲ, ಸಿಬಿಐಗೆ ಕೊಡಲ್ಲ ಎಂದು ಎರೆಡೆರಡು ಬಾರಿ ಹೇಳಿದರು.


ಒಂದು ವೇಳೆ ನ್ಯಾಯಾಲಯದ ಆದೇಶ ಮತ್ತಿತರ ಸಂದರ್ಭ ಬಂದಾಗ ಮಾತ್ರ ನಾವು ಸಿಬಿಐಗೆ ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಸಚಿವ ಸಂಪುಟದಲ್ಲಿ ಯಾವುದೇ ಪ್ರಕರಣ ಸಿಬಿಐಗೆ ಕೊಡಬಾರದೆಂಬ ತೀರ್ಮಾನ ಆಗಿದೆ. ಬಳ್ಳಾರಿ ಗಲಾಟೆ ಬಗ್ಗೆಯೂ ಸಿಬಿಐ ತನಿಖೆಗೆ ಕೊಡುವ ಅಗತ್ಯತೆ ಇಲ್ಲ ಎಂದರು.


ರಾಜಕೀಯ ಹೇಳಿಕೆ


ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸ್ ಆಯುಕ್ತ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅದು ಸಾಕು ಎಂದು ನನಗೆ ಅನಿಸುತ್ತದೆ. ಆ ಬಗ್ಗೆ ನಾನು ಹೆಚ್ಚಿನದೇನು ಪ್ರತಿಕ್ರಿಯಿಸಲ್ಲ. ಎಲ್ಲದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಪೊಲೀಸ್ ಆಯುಕ್ತರು ಈಗಾಗಲೇ ನಾವು ಮಹಿಳೆಯನ್ನು ವಿವಸ್ತ್ರ ಮಾಡಿಲ್ಲ. ಆಕೆಯೇ ಪೊಲೀಸ್ ಬಂಧನವಾದ ಮೇಲೆ ಆ ರೀತಿ ನಡೆದುಕೊಂಡಿದ್ದಾರೆ ಎಂದರು. ಪೊಲೀಸ್ ಆಯುಕ್ತರೇ ಹೇಳಿರುವಾಗ ಅದಕ್ಕಿಂತ ಇನ್ನೆನ್ನು ಹೇಳಬೇಕು. ಎಲ್ಲದರಲ್ಲೂ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಒಬ್ಬ ಹೆಣ್ಣು ಮಗಳ ವಿಚಾರದಲ್ಲಿ ಈ ರೀತಿ ರಾಜಕೀಯ ಮಾಡುವುದು ಸರಿ ಕಾಣಲ್ಲ ಎಂದು ಹೇಳಿದರು.


ಯಾವ ಪಕ್ಷದವರನ್ನೂ ಅವರ ರಾಜಕೀಯ ಹಿನ್ನೆಲೆಯಲ್ಲಿ ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ. ಪೊಲೀಸರಿಗೆ ಆ ರೀತಿ ಮಾಡಲು ನಾವು ಅವಕಾಶ ಮಾಡಿಕೊಡಲ್ಲ ಎಂದು ಸ್ಪಷ್ಟಪಡಿಸಿದರು.


ರಾಜ್ಯದಲ್ಲಿ ಅನಧಿಕೃತವಾಗಿ ಬಾಂಗ್ಲಾ ದೇಶದವರು ನೆಲೆಸಿದ್ದರೆ ಅವರನ್ನು ಗಡಿಪಾರು ಮಾಡುವ ಕೆಲಸ ಮಾಡುತ್ತೇವೆ. ಬೆಂಗಳೂರಿನಲ್ಲಾಗಲಿ, ರಾಜ್ಯದಲ್ಲಾಗಲಿ ಎಲ್ಲೆ ಆಗಲಿ ಬಾಂಗ್ಲಾ ದೇಶದ ನಿವಾಸಿಗಳಿದ್ದರೆ ಪತ್ತೆಹಚ್ಚಿ ಅವರನ್ನು ಗಡಿಪಾರು ಮಾಡುವ ಕೆಲಸ ಮಾಡುತ್ತೇವೆ ಎಂದರು
ರಬ್ಬರ್ ಸ್ಟ್ಯಾಂಪ್ ಎಂದ ಕುಮಾರಸ್ವಾಮಿಗೆ ಧನ್ಯವಾದ


ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರು ಎಂದಿದ್ದಾರೆ. ಅದನ್ನು ನಾನು ಸ್ವೀಕರಿಸುತ್ತೇನೆ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದರು.


ಕೇಂದ್ರದ ಸಚಿವರಾಗಿರುವ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಜವಾಬ್ದಾರಿಯಿಂದ ಅವರು ಮಾತನಾಡಿದ್ದಾರೆ ಎಂದು ಅಂದುಕೊಳ್ಳುತ್ತೇನೆ. ಅವರ ಮಾತುಗಳನ್ನು ಸ್ವೀಕರಿಸುತ್ತೇನೆ. ನಾನಂತೂ ಒಬ್ಬ ಜವಾಬ್ದಾರಿ ಗೃಹ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಅರಿವು ನನಗಿದೆ ಎಂದರು.


ಕುಮಾರಸ್ವಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅವರಿಗೆ ನನ್ನ ಸಾಮರ್ಥ್ಯ, ವ್ಯಕ್ತಿತ್ವ ಎಲ್ಲವೂ ಗೊತ್ತಿದೆ. ಹೀಗಿದ್ದರೂ ಅವರು ನನ್ನ ಬಗ್ಗೆ ಮತನಾಡಿದ್ದಾರೆ ಇರಲಿ ಅವರು ಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ ಎಂದು ಅಂದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು.


ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಷ್ಟು ದಿನ ನಾನು ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳಿಕೆ ನೀಡಿದ್ದಾರಲ್ಲಾ ಎಂಬ ಪ್ರಶ್ನೆಗೆ. ಅದಕ್ಕೆ ನಾನೇನು ಹೇಳಲಿ. ನೀವು ಏನು ನಿರೀಕ್ಷೆ ಮಾಡಿದ್ದಿರೋ ಅವರು ಹೇಳಿದ್ದಾರೆ ನಿಜ. ಅದಕ್ಕೆ ನಾನೇನು ಪ್ರತಿಕ್ರಿಯೆ ಕೊಡಲಿ ಎಂದರು.