
ತಪ್ಪಿದ ದುರಂತ
ನವದೆಹಲಿ, ಏ. ೨೬- ದೆಹಲಿಯಿಂದ ಸ್ವಿಡ್ಜರ್ಲ್ಯಾಂಡ್ಗೆ ತೆರಳುತ್ತಿದ್ದ ವಿಮಾನವೊಂದು ಟೇಕ್ಆಫ್ ಆಗುವ ವೇಳೆ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ೬ ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಬೆಳಿಗ್ಗೆ ಸ್ವಿಡ್ಜರ್ಲ್ಯಾಂಡ್ ಜ್ಯೂರಿಚ್ಗೆ ತೆರಳಬೇಕಿದ್ದ ಸ್ವಿಸ್ ವಿಮಾನಯಾನ ಸಂಸ್ಥೆಯ ಏರ್ಬಸ್ ವಿಮಾನ ಟೇಕ್ಆಫ್ ಆಗಲು ರನ್ವೇ ಮೇಲೆ ಚಲಿಸುತ್ತಿದ್ದು, ಈ ವೇಳೆ ವಿಮಾನದ ಒಂದು ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ವಿಮಾನವನ್ನು ನಿಲ್ಲಿಸಿದ್ದು, ನಂತರ ವಿಮಾನದ ಕಿಟಕಿ ಬಾಗಿಲುಗಳನ್ನು ತೆರೆದು ಸ್ಲೈಡ್ಗಳ ಮೂಲಕ ಪ್ರಯಾಣಿಕರನ್ನು ರನ್ವೇನಲ್ಲಿ ಇಳಿಸಲಾಯಿತು.
ವಿಮಾನದಿಂದ ಇಳಿಯುವಾಗ ೬ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ವಿಮಾನದಲ್ಲಿದ್ದ ಎಲ್ಲಾ ೨೨೮ ಪ್ರಯಾಣಿಕರು ಹಾಗೂ ಸಿಬ್ಬಂದಿ ಪಾರಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಕೂದಲೆಳೆಯಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ವಿಮಾನದ ತಾಂತ್ರಿಕ ದೋಷಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ಪಡೆಯವರು ವಿಮಾನದ ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತವಾಗುವುದನ್ನು ತಡೆದಿದ್ದಾರೆ.
ಈ ಘಟನೆಯ ಬಗ್ಗೆ ಸ್ವಿಸ್ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿದ್ದು, ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ತಕ್ಷಣ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಇದಕ್ಕಾಗಿ ನಾವು ವಿಶೇಷ ಟಾಸ್ಕ್ಫೋರ್ಸ್ ರಚಿಸಿದ್ದೇವೆ. ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದು ಹೇಳಿದೆ.

























