
ಚಿತ್ರದುರ್ಗಏ. ೨೬: ಬರುವ ಮೇ ತಿಂಗಳ ೯ ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಯಡಿಯೂರಪ್ಪ ಅಭಿಮಾನೋತ್ಸವದ ಕಾರ್ಯಕ್ರಮದ ಸ್ಥಳದಲ್ಲಿ ಇಂದು ನಾಡಿನ ಹಲವು ಮಠಾಧೀಶರ ಸಮ್ಮುಖದಲ್ಲಿ ಬಿಜೆಪಿ ನಾಯಕರುಗಳು ಭೂಮಿ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಅಪ್ರತಿಮ ಹೋರಾಟಗಾರ, ರೈತ ನಾಯಕ, ಛಲದಂಕ ಮಲ್ಲ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ೫೦ ವರ್ಷಗಳ ರಾಜಕೀಯ ಜೀವನವಿಡೀ ರೈತರು, ಬಡವರು, ದಲಿತರ ಪರವಾಗಿ ಧ್ವನಿ ಎತ್ತಿದ ನಾಯಕ ಎಂದು ಹೇಳಿದರು
ಯಡಿಯೂರಪ್ಪ ಅವರು ೫೦ ವರ್ಷಗಳ ರಾಜಕೀಯ ಜೀವನ ಪೂರೈಸಿದ ಹಿನ್ನೆಲೆಯಲ್ಲಿ ಮೇ ೯ರಂದು ಇಲ್ಲಿ ಸಂಭ್ರಮೋತ್ಸವವನ್ನು ಅಭಿಮಾನೋತ್ಸವವಾಗಿ ಆಚರಿಸಲಾಗುವುದು ಎಂದು ಹೇಳಿದರು.
ನಾಡಿನ ಗುರು ಹಿರಿಯರು ತೀರ್ಮಾನ ಮಾಡಿದಂತೆ ಇವತ್ತು ಶುಭ ಮುಹೂರ್ತದಲ್ಲಿ ಭೂಮಿಪೂಜೆ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿದೆ. ೯ರಂದು ಒಂದು ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಬರಲಿದ್ದಾರೆ. ನಾಡಿನ ಹರಗುರು ಚರ ಮೂರ್ತಿಗಳ ಸಮಕ್ಷಮದಲ್ಲಿ ಕಾರ್ಯಕ್ರಮ ಇದೆ ಎಂದರು.
ದೇಶದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ ನಡೆಯಲಿದೆ. ಈ ಸಂಭ್ರಮೋತ್ಸವಕ್ಕೆ ನಾಡಿನ ಜನತೆ ಬರಬೇಕೆಂದು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರುಗಳಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ರೇಣುಕಾಚಾರ್ಯ, ಬಿ.ಸಿ. ಪಾಟೀಲ್, ಕಟ್ಟಾ ಸುಬ್ರಮಣ್ಯ ನಾಯ್ಡು, ಶಾಸಕರುಗಳಾದ ರಾiಮೂರ್ತಿ. ಜ್ಯೋತಿ ಗಣೇಶ್, ಹರೀಶ್ ಪೂಂಜಾ, ಸುರೇಶ್ ಗೌಡ, ಮುಖಂಡರುಗಳಾದ ಪ್ರೀತಂಗೌಡ, ಬೆಳ್ಳಿ ಪ್ರಕಾಶ್, ಎನ್. ಮಹೇಶ್, ತಿಪ್ಪಾರೆಡ್ಡಿ, ಹಾಲಪ್ಪ ಆಚಾರ್, ದೊಡ್ಡನ ಗೌಡ ಪಾಟೀಲ್, ಸೇರಿದಂತೆ ಹಲವರು ಮುಖಂಡರು ಇದ್ದರು.

























