
ವಿಜಯಪುರ, ಜೂ. 20: ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಫೈರಿಂಗ್ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ದೊರೆತಿದ್ದು, ದೂರುದಾರನೇ ಸುಳ್ಳು ಕಥೆ ಸೃಷ್ಟಿಸಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೂ. 3ರಂದು ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 255/2026 ದಾಖಲಿಸಲಾಗಿತ್ತು. ಇಟ್ಟಂಗಿಹಾಳ ದೊಡ್ಡಿಯ ನಿವಾಸಿ ದಯವಂತ ಡೇರೆ ಅವರು, ತೊರವಿ ಗ್ರಾಮದ ಹದ್ದಿಯಲ್ಲಿರುವ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಬ್ಬರು ಅಪರಿಚಿತರು ಮುಖ ಮುಚ್ಚಿಕೊಂಡು ಬಂದು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ ಎಂದು ದೂರು ನೀಡಿದ್ದರು. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿ ಆರು ಜನರ ಹೆಸರನ್ನೂ ಆರೋಪಿಗಳಾಗಿ ಉಲ್ಲೇಖಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೆÇಲೀಸರು ವಿಶೇಷ ತನಿಖಾ ತಂಡ ರಚಿಸಿ ಪರಿಶೀಲನೆ ನಡೆಸಿದರು. ತನಿಖೆಯಲ್ಲಿ ಆರೋಪಿಗಳೆಂದು ಶಂಕಿಸಲಾದ ಆನಂದ ಅಲಿಯಾಸ್ ಅನೀಲ ಡೇರಿ ಹಾಗೂ ಕೊಂಡಿಬಾ ಮಾನವರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಸತ್ಯ ಹೊರಬಂದಿದ್ದು, ದಯವಂತ ಡೇರೆ ಹಾಗೂ ಇತರ ಇಬ್ಬರು ಸೇರಿ ಹಳೆಯ ವೈಮನಸ್ಸಿನ ಕಾರಣದಿಂದ ಕೆಲವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಉದ್ದೇಶ ಹೊಂದಿದ್ದರು ಎಂದು ತಿಳಿದು ಬಂದಿದೆ.
ಜಾಲಗೇರಿ ಗ್ರಾಮದ ಹೊಲವೊಂದರಲ್ಲಿ ಆನಂದ ಡೇರಿ ತನ್ನ ಬಳಿ ಇದ್ದ ಕಂಟ್ರಿ ಪಿಸ್ತೂಲ್‍ನಿಂದ ದಯವಂತನ ಬಲಗೈ ಬಳಿ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ. ಬಳಿಕ ತೊರವಿ ಗ್ರಾಮದ ಬಳಿ ಘಟನೆ ನಡೆದಂತೆ ನಾಟಕವಾಡಿ, ಎಫ್‍ಐಆರ್‍ನಲ್ಲಿ ಹೆಸರಿಸಲಾದ ಇತರರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ.
ಈ ಸಂಬಂಧ ದಯವಂತ ಡೇರೆ, ಆನಂದ ಅಲಿಯಾಸ್ ಅನೀಲ ಡೇರಿ ಹಾಗೂ ಕೊಂಡಿಬಾ ಮಾನವರ ಎಂಬ ಮೂವರನ್ನು ಜೂ. 18ರಂದು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಂಟ್ರಿ ಪಿಸ್ತೂಲ್‍ನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೆÇಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.


























