
ಬೆಂಗಳೂರು, ಫೆ. ೩- ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ, ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳು ನಡೆದು ಪ್ರತಿಪಕ್ಷಗಳು ಅಬಕಾರಿ ಸಚಿವರು ರಾಜೀನಾಮೆ ನೀಡಬೇಕು ಎಂಬ ಆಗ್ರಹವನ್ನು ಮಾಡಿದವು.
ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಈ ಭ್ರಷ್ಚಾಚಾರದಲ್ಲಿ ಅಬಕಾರಿ ಸಚಿವರೆ ಭಾಗಿಯಾಗಿದ್ದಾರೆ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಒಕ್ಕೊರಲಿನಿಂದ ಆಗ್ರಹಿಸಿದವು.
ಇಂದು ಸದನ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸುದೀರ್ಘವಾಗಿ ಮಾತನಾಡಿ, ಅಬಕಾರಿ ಇಲಾಖೆಯಲ್ಲಿ ಯಾವ ರೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಅಧಿಕಾರಿಗಳು, ಸಚಿವರು ಕೂಡಿ ನಡೆಸಿರುವ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ವಿಪಕ್ಷ ನಾಯಕ ಆರ್. ಅಶೋಕ್, ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಪ್ರದರ್ಶಿಸಿ, ಲಂಚಕ್ಕೆ ಬೇಡಿಕೆ ಇಟ್ಟಿರುವ ಅಧಿಕಾರಿಗಳ ಆಡಿಯೋವನ್ನು ಸದನದ ಮುಂದಿಟ್ಟು, ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಾಕ್ಷಿ ಕೊಟ್ಟಿದ್ದೇನೆ. ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಕೂಡಲೇ ಅಬಕಾರಿ ಸಚಿವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಪ್ರತಿಪಕ್ಷ ನಾಯಕ ಅಶೋಕ್, ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರಾದ ಎ. ಎಸ್. ಪೊನ್ನಣ್ಣ, ಅಶೋಕ್ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಪಕ್ಷ ನಾಯಕರು ಏನು ಹೇಳುತ್ತಿದ್ದಾರೋ ನಮಗೆ ಅರ್ಥವಾಗುತ್ತಿಲ್ಲ ಎಂದಾಗ, ವಿಪಕ್ಷ ಸದಸ್ಯರು ಒಮ್ಮೆಲೆ ಎದ್ದು ನಿಂತು ನಿಮಗೆ ಅರ್ಥವಾಗಲ್ಲ ಬಿಡಿ ಭ್ರಷ್ಟಾಚಾರ ನಡೆದಿದೆ.ಮೊದಲು ಅಬಕಾರಿ ಸಚಿವರು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಅಶೋಕ್ ಅವರು, ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿರುವ ಅಬಕಾರಿ ಉಪಆಯುಕ್ತ ನಾಗರಾಜಪ್ಪ ಅವರ ಆಡಿಯೋ ಸಂಭಾಷಣೆಯನ್ನು ಸದನದಲ್ಲಿ ಪ್ರದರ್ಶಿಸಿ ಅದನ್ನು ಓದಿ ಹೇಳಿ, ಸಚಿವರ ಹೆಸರನ್ನು ನಾಗರಾಜಪ್ಪ ಉಲ್ಲೇಖಿಸಿದ್ದಾರೆ. ಅವರಿಗೂ ಹಣ ಕೊಡಬೇಕು ಎಂದೆಲ್ಲಾ ಹೇಳಿದ್ದಾರೆ. ಇದನ್ನೆಲ್ಲಾ ನೋಡಿದರೆ ಅಬಕಾರಿ ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸ್ಪಷ್ಟ ಎಂದರು.
ಮಂಡ್ಯದಲ್ಲಿ ಅಬಕಾರಿ ಡಿಸಿಯ ಆಡಿಯೋವೊಂದಲ್ಲಿರುವ ಅವರ ಮಾತುಗಳನ್ನು ಓದಿದ ಆರ್. ಅಶೋಕ್ ಅವರು, ಈ ಅಧಿಕಾರಿ ಜಾತಿ ಎಲ್ಲವನ್ನು ಪ್ರಸ್ತಾಪಿಸಿದ್ದಾರೆ. ಅಧಿಕಾರಿಗಳು ಜಾತಿ ಮಾಡಲು ಹೊರಟಿದ್ದಾರೆ. ಸನ್ನದುದಾರರೊಬ್ಬರಿಗೆ ಕುರುಬ ಮುಖಂಡರ ಗ್ಯಾಂಗ್‌ನ್ನುಕರೆದುಕೊಂಡು ಹೋಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡು ಕೆಲಸ ಆಗುತ್ತೆ. ಜತೆಗೆ ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಅವರನ್ನೂ ಭೇಟಿ ಮಾಡು, ಅಲ್ಲಿಂದ ಫೋನ್ ಮಾಡಿಸು ಎಂದು ಸಲಹೆ ಮಾಡಿದ್ದಾರೆ. ಜತೆಗೆ ಒಕ್ಕಲಿಗ ಮುಖಂಡರನ್ನು ಕರೆದುಕೊಂಡು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡು ಎಂದು ಸಲಹೆ ಕೊಟ್ಟಿದ್ದಾರೆ. ಅಧಿಕಾರಿಗಳು ಹೀಗೆ ಜಾತಿ ಮಾಡಿದರೆ ಹೇಗೆ, ಆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಿ ಎಂದರು
ಈ ಅಧಿಕಾರಿಯ ಮಾತುಗಳನ್ನು ಸನ್ನದುದಾರ ರೆಕಾರ್ಡ್ ಮಾಡಿದ ನಂತರ ವರಸೆ ಬದಲಾಯಿಸಿದ ಮಂಡ್ಯ ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿ ನಾಗಶಯನ, ನನ್ನ ಬಗ್ಗೆ ಮಾಡಿರುವ ಆಡಿಯೋ ರೆಕಾರ್ಡ್ ವಾಪಸ್ ಕೊಡು. ನಿನ್ನ ಕೆಲಸ ಮಾಡಿಕೊಡುತ್ತೇನೆ ಎಂದು ಮಹಾತ್ಮಗಾಂಧೀಜಿ ಅವರ ಮೇಲೆ ಆಣೆ ಮಾಡಿದ್ದಾರೆ. ಇಂತಹ ಅಧಿಕಾರಿಯನ್ನು ಬಿಟ್ಟಿದ್ದಿರಲ್ಲಾ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು
ಈ ಹಂತದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಬಿಜೆಪಿಯ ಸುನಿಲ್‌ಕುಮಾರ್, ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿರುವಾಗ ಈ ಬಗ್ಗೆ ಚರ್ಚೆ ಬೇಕಾ. ಮೊದಲು ಸಚಿವರ ರಾಜೀನಾಮೆ ಪಡೆಯಿರಿ. ಮರ್ಯಾದೆ ಇದ್ದರೆ ಸಚಿವರು ರಾಜೀನಾಮೆ ಕೊಡಲಿ ಎಂದು ಏರು ಧ್ವನಿಯಲ್ಲಿ ಹೇಳಿದ್ದು, ಆಡಳಿತ ಪಕ್ಷದ ಸದಸ್ಯರ ಆಕ್ಷೇಪಕ್ಕೆ ಕಾರಣವಾಯಿತು.
ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಪರಸ್ಪರ ಮಾತಿನ ಚಕಮಕಿಗೆ ಇಳಿದು ಗದ್ದಲದ ವಾತಾವರಣ ರೂಪುಗೊಂಡಿತು.
ಇದಾದ ನಂತರ ತಮ್ಮ ಮಾತು ಮುಂದುವರೆಸಿದ ಆರ್. ಅಶೋಕ್, ಮದ್ಯ ಮಾರಾಟ ಸಂಘದ ಅಧ್ಯಕ್ಷ ಗುರುಸ್ವಾಮಿ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯಾವ ರೀತಿ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ಎಳೆ ಎಳೆಯಾಗಿ ತಿಳಿಸಿದ್ದಾರೆ. ಜತೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಊರಿನವರೇ ಅವರಿಗೆ ಆಪ್ತ ಸ್ನೇಹಿತರು, ಮುಖ್ಯಮಂತ್ರಿಗಳ ಸ್ನೇಹಿತರೇ ಅಬಕಾರಿ ಇಲಾಖೆಯ ಭ್ರಷ್ಟಾಚಾರ, ಪ್ರತಿ ವೈನ್‌ಸ್ಟೋರ್, ಬಾರ್‌ಗಳಿಂದ ಎಷ್ಟೇಷ್ಟು ಹಣ ತಿಂಗಳ ಮಾಮೂಲಿಯಾಗಿ ನಿಗದಿಯಾಗಿದೆ ಎಂಬುದನ್ನೆಲ್ಲಾ ಹೇಳಿದ್ದಾರೆ. ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿಗಳು ಸುಮ್ಮನಿಸಿದ್ದಾರೆ ಎಂದು ಹೇಳಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೌದ ಗುರುಸ್ವಾಮಿ ನಮ್ಮ ವರುಣ ಕ್ಷೇತ್ರದವನೇ ನಮ್ಮ ಪಕ್ಕದ ಪಂಚಾಯ್ತಿಯವನು. ಈ ಹಿಂದೆ ನಾನು ತಾಲ್ಲೂಕು ಮಂಡಳಿ ಸದಸ್ಯನಾಗಿದ್ದಾಗ ಆತ ಅಧ್ಯಕ್ಷನಾಗಿದ್ದ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಸ್ನೇಹಿತರೆ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಹೇಳಿದ್ದಾರೆ. ನಿಮ್ಮನ್ನು ಭೇಟಿ ಮಾಡಿ ತಿಳಿಸಿದ್ದೆ ಆದರೆ ಕ್ರಮ ಆಗಲಿಲ್ಲ ಎಂದೆಲ್ಲಾ ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲ ಹೇಳಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮಿರಿದೆ. ಅಬಕಾರಿ ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಅವರ ರಾಜೀನಾಮೆ ಪಡೆಯಿರಿ ಎಂದು ಒತ್ತಾಯಿಸಿದರು.
ವಿಪಕ್ಷಗಳ ಒತ್ತಡಕ್ಕೆ ಮಣಿದ ಸ್ಪೀಕರ್
ವಿಧಾನಸಭೆಯಲ್ಲಿಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್‌ಜಿ ಕಾಯ್ದೆ ಬಗ್ಗೆ ಮೊದಲು ಚರ್ಚೆ ಆಗಬೇಕಿತ್ತಾದರೂ ಪ್ರತಿ ಪಕ್ಷಗಳ ಒತ್ತಡಕ್ಕೆ ಮಣಿದು ವಿಧಾನಸಭಾಧ್ಯಕ್ಷರು ಮೊದಲು ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಚರ್ಚೆಗೆ ಅನುವು ಮಾಡಿಕೊಟ್ಟರು.
ವಿಧಾನಸಭೆಯ ಕಾರ್ಯಸೂಚಿಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಬಿಜಿರಾಮ್‌ಜಿ ಕಾಯ್ದೆಯನ್ನು ವಿರೋಧಿಸುವ ಹಾಗೂ ಮನರೇಗಾ ಪುನರ್ ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಮಂಡಿಸಬೇಕಿತ್ತು. ಆದರೆ ಪ್ರತಿಪಕ್ಷಗಳು ಮೊದಲು ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ನಂತರ ವಿಬಿಜಿ ರಾಮ್‌ಜಿ ಕಾಯ್ದೆ ವಿಚಾರವನ್ನು ಕೈಗೆತ್ತಿಕೊಳ್ಳಿ ಎಂದು ಪಟ್ಟುಹಿಡಿದಿದ್ದರಿಂದ ಕಲಾಪ ಆರಂಭ ಸುಮಾರು ಒಂದೂವರೆ ಗಂಟೆ ತಡವಾಯಿತು.
ಇಂದು ಸದನ ೧೦ ಗಂಟೆಗೆ ನಿಗದಿಯಾಗಿತ್ತಾದರೂ ಪ್ರತಿಪಕ್ಷಗಳ ಪಟ್ಟಿನಿಂದ ಸದನ ಆರಂಭವಾದಾಗ ಮಧ್ಯಾಹ್ನ ೧೧.೪೫ ನಿಮಿಷ ಆಗಿತ್ತು. ಪ್ರತಿಪಕ್ಷಗಳ ಆಗ್ರಹಕ್ಕೆ ಮಣಿದು ಅಬಕಾರಿ ಇಲಾಖೆಯ ಚರ್ಚೆಯ ನಂತರ ವಿಬಿಜಿ ರಾಮ್‌ಜಿ ಕಾಯ್ದೆ ಹಾಗೂ ಮನರೇಗಾ ಯೋಜನೆ ಪುನರ್ ಸ್ಥಾಪನೆ ನಿರ್ಣಯ ಹಾಗೂ ಮಂಡನೆ ಬಗ್ಗೆ ಚರ್ಚೆ ನಡೆಯಲಿದೆ.


























